ಮಂಗಳೂರು ಬಾಂಬರ್ ಮೇಲೆ ಮತ್ತೊಂದು ಕೇಸ್ ದಾಖಲು

ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಆದಿತ್ಯ ರಾವ್ ಮೇಲೆ ಮತ್ತೊಂದು ಕೇಸ್ ದಾಖಲಾಗಿದೆ.

ಬಜ್ಪೆ ವಿಮಾನ ನಿಲ್ದಾಣದ ಸಿಬ್ಬಂದಿ ಅಬ್ದುಲ್ ಹಮೀದ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಆದಿತ್ಯ ರಾವ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಜ.20ರ ಮಧ್ಯಾಹ್ನ 2.30ಕ್ಕೆ ಆದಿತ್ಯರಾವ್ ಇಂಡಿಗೋ ಮ್ಯಾನೇಜರ್ ಅವರಿಗೆ, ಹೈದರಾಬಾದಿಗೆ ತೆರಳುತ್ತಿರುವ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಬೆದರಿಕೆ ಕರೆ ಮಾಡಿದ್ದ. ಬೆದರಿಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ಬಾಂಬರ್ ಆದಿತ್ಯರಾವ್ ಮಾಸ್ಟರ್ ಪ್ಲಾನ್ ಕೇಳಿ ದಂಗಾದ ಬೆಂಗಳೂರು ಪೊಲೀಸರು

ಮಧ್ಯಾಹ್ನ 2.15ಕ್ಕೆ ಹೈದರಾಬಾದ್‍ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೋ ವಿಮಾನ ಮರಳಿ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್‍ಗೆ ತೆರಳಬೇಕಿತ್ತು. ಚೆಕ್ ಇನ್ ಆಗಿ ಎಲ್ಲ ಪ್ರಯಾಣಿಕರನ್ನು ವಿಮಾನದ ಒಳಗಡೆ ಕಳುಹಿಸಲಾಗಿತ್ತು.

ವಿಮಾನ ಟೇಕಾಫ್ ಆಗಲು ಸಿದ್ಧತೆ ನಡೆಯುತ್ತಿದ್ದಾಗ ಇಂಡಿಗೋ ಕಚೇರಿಗೆ ದೂರವಾಣಿ ಕರೆ ಬಂದಿತ್ತು. ಹೈದರಾಬಾದ್‍ಗೆ ತೆರಳುವ ಇಂಡಿಗೋ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಆಗಂತುಕನೊಬ್ಬ ಕರೆ ಮಾಡಿ ಬೆದರಿಸಿದ್ದ.

ಬೆದರಿಕೆ ಕರೆ ಬಂದ ಬಗ್ಗೆ ಸಿಬ್ಬಂದಿ ನಿಲ್ದಾಣದ ಭದ್ರತಾ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಕೂಡಲೇ ಜಾಗೃತರಾದ ನಿಲ್ದಾಣದ ಭದ್ರತಾ ಸಿಬ್ಬಂದಿ ಇಂಡಿಗೋ ವಿಮಾನ ಸಂಚಾರಕ್ಕೆ ತಡೆ ನೀಡಿ ಎಲ್ಲ ಪ್ರಯಾಣಿಕರನ್ನು ಮರಳಿ ಟರ್ಮಿನಲ್‍ಗೆ ಕರೆತಂದಿದ್ದರು.

ವಿಮಾನದಲ್ಲಿದ್ದ ಪ್ರತಿಯೊಂದು ಬ್ಯಾಗ್‍ನ್ನು ಹೊರತೆಗೆದು ಕೂಲಂಕಷವಾಗಿ ತಪಾಸಣೆ ಮಾಡಲಾಯಿತು. ಸಂಜೆ 4 ಗಂಟೆಗೆ ಆರಂಭಗೊಂಡ ತಪಾಸಣೆ ರಾತ್ರಿ 7.30ರವರೆಗೂ ನಡೆದಿತ್ತು. ತಪಾಸಣೆ ಪೂರ್ಣಗೊಂಡ ಬಳಿಕ ಇದೊಂದು ಹುಸಿ ಕರೆ ಎಂಬ ತೀರ್ಮಾನಕ್ಕೆ ಭದ್ರತಾ ಸಿಬ್ಬಂದಿ ಬಂದ ನಂತರ ಇಂಡಿಗೋ ವಿಮಾನ ಹೈದರಾಬಾದಿಗೆ ಪ್ರಯಾಣ ಬೆಳೆಸಿತ್ತು.

Comments

Leave a Reply

Your email address will not be published. Required fields are marked *