ಐಸಿಸಿಯ ಮೊದಲ ಮಹಿಳಾ ರೆಫ್ರಿಯಾಗಿ ಜಿ.ಎಸ್.ಲಕ್ಷ್ಮೀ ಆಯ್ಕೆ

ನವದೆಹಲಿ: ಐಸಿಸಿಯ ಮೊದಲ ಮಹಿಳಾ ರೆಫ್ರಿಯಾಗಿ ಭಾರತದ ಮಾಜಿ ಕ್ರಿಕೆಟರ್ ಜಿ.ಎಸ್.ಲಕ್ಷ್ಮೀ ಆಯ್ಕೆಯಾಗಿದ್ದಾರೆ.

ಜಿ.ಎಸ್.ಲಕ್ಷ್ಮೀ ಅವರು 51 ವರ್ಷದವರಾಗಿದ್ದು, 2008-09ರಲ್ಲಿ ನಡೆದ ದೇಶಿಯ ಮಹಿಳಾ ಕ್ರಿಕೆಟ್‍ನಲ್ಲಿ ಮ್ಯಾಚ್ ರೆಫ್ರಿಯಾಗಿದ್ದರು. ಅಷ್ಟೇ ಅಲ್ಲದೆ ಜಿ.ಎಸ್.ಲಕ್ಷ್ಮೀ ಅವರು ಮಹಿಳೆಯರ ಮೂರು ಏಕದಿನ ಪಂದ್ಯ ಹಾಗೂ ಮಹಿಳಾ ಟಿ-20 ಪಂದ್ಯದಲ್ಲಿ ರೆಫ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಐಸಿಸಿಯ ಈ ಆಯ್ಕೆ ನಿರ್ಧಾರದಿಂದ ಲಕ್ಷ್ಮೀ ಅವರು ಇನ್ನು ಮುಂದೆ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ರೆಫ್ರಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ.

ಈ ಆಯ್ಕೆ ನನಗೆ ಖುಷಿ ತಂದಿದೆ. ನಾನು ಭಾರತದ ಮಹಿಳಾ ಕ್ರಿಕೆಟ್ ಟೀಂ ಆಟಗಾರ್ತಿಯಾಗಿ ಹಾಗೂ ಮ್ಯಾಚ್ ರೆಫ್ರಿಯಾಗಿ ದೀರ್ಘ ಅವಧಿಯ ವೃತ್ತಿಜೀವನ ಕಳೆದಿದ್ದೇನೆ. ನನ್ನ ಸುದೀರ್ಘ ಸೇವೆ, ಆಟಗಾರ್ತಿಯಾಗಿ ಹಾಗೂ ಮ್ಯಾಚ್ ರೆಫ್ರಿಯಾಗಿ ಕೆಲಸ ಮಾಡಿದ ಅನುಭವವನ್ನು ಪರಿಣಿಸಿ ನನ್ನನ್ನು ಆಯ್ಕೆ ಮಾಡಿದ್ದಾರೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಜಿ.ಎಸ್.ಲಕ್ಷ್ಮೀ ಸಂತಸ ವ್ಯಕ್ತಪಡಿಸಿದ್ದಾರೆ.

ಐಸಿಸಿ ಅಧಿಕಾರಿಗಳು, ಬಿಸಿಸಿಐ, ಹಿರಿಯರು, ಕುಟುಂಬಸ್ಥರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಎಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *