ದೇಶದ ಮೊದಲ ವಂದೇ ಭಾರತ್‌ ಸ್ಲೀಪರ್ ರೈಲು -‌ ವಿಶೇಷತೆಗಳೇನು? ಟಿಕೆಟ್‌ ದರ ಎಷ್ಟು?

ಲವು ದಿನಗಳಿಂದ ಕುತೂಹಲದಿಂದ ಕಾಯುತ್ತಿದ್ದ ವಂದೇ ಭಾರತ್ ಸ್ಲೀಪರ್ ರೈಲು (Vande Bharat Sleeper Train) ಓಡಾಟವನ್ನ ಕಣ್ತುಂಬಿಕೊಳ್ಳುವ ಸಮಯ ಹತ್ತಿರದಲ್ಲಿದೆ. ವಂದೇ ಭಾರತ್ ಸ್ಲೀಪರ್ ರೈಲು ಯಾವಾಗ ಪ್ರಾರಂಭವಾಗುತ್ತದೆ? ಯಾವ ಮಾರ್ಗದಲ್ಲಿ ಚಲಿಸಲಿದೆ ಎಂಬ ಅನೇಕ ಪ್ರಶ್ನೆಗೆ ಬ್ರೇಕ್‌ ಬಿದ್ದಿದೆ. ದೀಪಾವಳಿ ಮತ್ತು ಛತ್ ಪೂಜೆಗೂ ಮುನ್ನವೇ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಓಡಿಸಲು ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ‌ಹಾಗಿದ್ರೆ ವಂದೇ ಭಾರತ್‌ ಸ್ಲೀಪರ್‌ ರೈಲಿನ ವಿಶೇಷತೆಗಳೇನು? ಯಾವಾಗ ಮತ್ತು ಎಲ್ಲಿ ಚಲಿಸುತ್ತದೆ? ಟಿಕೆಟ್‌ ದರ ಎಷ್ಟು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

ಎಲ್ಲಿಂದ ಎಲ್ಲಿಗೆ ಪ್ರಯಾಣ?
ದೆಹಲಿಯಿಂದ ಪ್ರಯಾಗ್‌ರಾಜ್ ಮೂಲಕ ಪಾಟ್ನಾಗೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ದೀಪಾವಳಿಗೆ ಮೊದಲು ಆರಂಭವಾಗಲಿದೆ. ಇದು ವೇಗ, ಸೌಕರ್ಯ ಮತ್ತು ಸುರಕ್ಷತೆಯ ವಿಷಯದಲ್ಲಿ ಹೊಸ ಪ್ರಯಾಣದ ಅನುಭವವನ್ನು ನೀಡುತ್ತದೆ.ಈ ಸ್ಲೀಪರ್ ರೈಲು ತನ್ನ ಸುಧಾರಿತ ಸೌಲಭ್ಯಗಳು ಮತ್ತು ವೇಗದಿಂದಾಗಿ ರಾಜಧಾನಿ ಎಕ್ಸ್‌ಪ್ರೆಸ್‌ಗಿಂತ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಬಹುನಿರೀಕ್ಷಿತ ಸೇವೆಯು ದೆಹಲಿಯಿಂದ ಪಾಟ್ನಾಗೆ ಪ್ರಯಾಗ್‌ರಾಜ್ ಮೂಲಕ ಚಲಿಸಲಿದ್ದು, ಸುಮಾರು 1,000 ಕಿಲೋಮೀಟರ್ ದೂರವನ್ನು ಕೇವಲ 11.5 ಗಂಟೆಗಳಲ್ಲಿ ಕ್ರಮಿಸಲಿದೆ. ಸದ್ಯ ಅದೇ ಮಾರ್ಗದಲ್ಲಿ ಸಂಚಾರ ಮಾಡುವ ರಾಜಧಾನಿ ಎಕ್ಸ್‌ಪ್ರೆಸ್ ಈ ಪ್ರಯಾಣಕ್ಕೆ 23 ಗಂಟೆ ತೆಗೆದುಕೊಳ್ಳುತ್ತಿದೆ. ರಾಜಧಾನಿ ಎಕ್ಸ್‌ಪ್ರೆಸ್‌ಗೆ ಹೋಲಿಸಿದರೆ ಇದು ಬಹಳ ಕಡಿಮೆ ಸಮಯದಲ್ಲಿ ದೆಹಲಿಯನ್ನು ತಲುಪಬಹುದು. ವಂದೇ ಭಾರತ್‌ ರೈಲುಗಳ ಹೊಸ ಆವೃತ್ತಿ ರೈಲ್ವೇ ದರದಲ್ಲಿ ವಿಮಾನ ಪ್ರಯಾಣದಂಥ ಅನುಭವ ನೀಡುತ್ತದೆ. ರಾತ್ರಿಯ ವೇಳೆ ಪ್ರಯಾಣಿಕರಿಗೆ ವೇಗ, ಅನುಕೂಲತೆ ಮತ್ತು ಆಧುನಿಕ ಸೌಲಭ್ಯಗಳನ್ನು ನೀಡುತ್ತದೆ.

ವಿಶೇಷತೆಗಳೇನು?
ಈಗ ಇರುವ ವಂದೇ ಭಾರತ್ ಚೇರ್ ಕಾರ್ ರೈಲುಗಳಿಗಿಂತ ಭಿನ್ನವಾಗಿ, ಸ್ಲೀಪರ್ ಆವೃತ್ತಿಯನ್ನು ನಿರ್ದಿಷ್ಟವಾಗಿ ದೀರ್ಘ-ರಾತ್ರಿ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಗಂಟೆಗೆ 180 ಕಿ.ಮೀ ಗರಿಷ್ಠ ವೇಗದೊಂದಿಗೆ, ಇದು ಪ್ರಮುಖ ಮಾರ್ಗಗಳಲ್ಲಿ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ.

ಈ ರೈಲು 16 ಬೋಗಿಗಳನ್ನು ಹೊಂದಿದ್ದು, ಒಟ್ಟು 1,128 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಮೂರು ವರ್ಗಗಳಲ್ಲಿ ಹರಡಿಕೊಂಡಿದೆ – ಎಸಿ ಪ್ರಥಮ ದರ್ಜೆ, ಎಸಿ 2 ಟೈರ್ ಮತ್ತು ಎಸಿ 3 ಟೈರ್. ಪ್ರತಿಯೊಂದು ವರ್ಗವನ್ನು ವಿವಿಧ ರೀತಿಯ ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಕೈಗೆಟುಕುವ ದರಗಳಲ್ಲಿ ವಿವಿಧ ಮಟ್ಟದ ಸೌಕರ್ಯವನ್ನು ನೀಡುತ್ತದೆ.

ಪ್ರಯಾಣಿಕರು ರಿಯಲ್‌ಟೈಮ್‌ ಆಡಿಯೋ ಮತ್ತು ವಿಡಿಯೋ ಪ್ರಕಟಣೆಗಳು, ಎಲ್‌ಇಡಿ ಮಾಹಿತಿ ಪರದೆಗಳು ಮತ್ತು ಸಿಸಿಟಿವಿ ಕಣ್ಗಾವಲುಗಳನ್ನು ಎದುರುನೋಡಬಹುದು, ಇದು ಪ್ರಯಾಣವನ್ನು ಮಾಹಿತಿಯುಕ್ತ ಮತ್ತು ಸುರಕ್ಷಿತವಾಗಿಸುತ್ತದೆ. ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು, ಸ್ಪರ್ಶ-ಮುಕ್ತ ಬಯೋ-ವ್ಯಾಕ್ಯೂಮ್ ಶೌಚಾಲಯಗಳು ಮತ್ತು ಅಂಗವಿಕಲ ಸ್ನೇಹಿ ಬರ್ತ್‌ಗಳು ಮತ್ತು ವಿಶ್ರಾಂತಿ ಕೊಠಡಿಗಳ ಸೇರ್ಪಡೆಯು ಹೆಚ್ಚಿನ ಪ್ರವೇಶ ಮತ್ತು ನೈರ್ಮಲ್ಯವನ್ನು ಖಚಿತಪಡಿಸುತ್ತದೆ.

ಇನ್ನು ಇಷ್ಟು ಮಾತ್ರವಲ್ಲದೇ ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫಸ್ಟ್ ಎಸಿ ಕೋಚ್‌ಗಳಲ್ಲಿ ಬಿಸಿನೀರಿನ ಸ್ನಾನದ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ, ಇದು ಪ್ರಯಾಣಿಕರಿಗೆ ರೈಲಿನಲ್ಲಿ ಹೋಟೆಲ್‌ನಂತಹ ಅನುಭವವನ್ನು ನೀಡುತ್ತದೆ. ಸುರಕ್ಷತಾ ದೃಷ್ಟಿಯಿಂದ, ರೈಲು ಪ್ರಯಾಣದ ಸಮಯದಲ್ಲಿ ಗರಿಷ್ಠ ರಕ್ಷಣೆ ಒದಗಿಸಲು ತುರ್ತು ಬ್ರೇಕಿಂಗ್ ಕಾರ್ಯವಿಧಾನಗಳು, ಆಂಟಿ-ಕ್ಲೈಂಬಿಂಗ್ ತಂತ್ರಜ್ಞಾನ ಮತ್ತು ಕವಚ್ ತಂತ್ರಜ್ಞಾನ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಅಳವಡಿಸಲ್ಪಟ್ಟಿದೆ.

ಇದಲ್ಲದೆ, ವಂದೇ ಭಾರತ್ ಎಕ್ಸ್‌ಪ್ರೆಸ್ ನಿಯಮಿತ ರೈಲುಗಳಲ್ಲಿಯೂ ಬದಲಾವಣೆಗಳನ್ನು ಮಾಡಲಾಗುವುದು. ಪ್ರಸ್ತುತ, ವಂದೇ ಭಾರತ್ ರೈಲುಗಳು 7 ಮಾರ್ಗಗಳಲ್ಲಿ ಓಡುತ್ತಿವೆ. ಇವುಗಳಲ್ಲಿ, 4 ರೈಲುಗಳು 8 ಬೋಗಿಗಳನ್ನು ಹೊಂದಿದ್ದರೆ, 3 ರೈಲುಗಳು 16 ಬೋಗಿಗಳನ್ನು ಹೊಂದಿವೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ, ಹೆಚ್ಚಿನ ಬೋಗಿಗಳನ್ನು ಸೇರಿಸುವ ಯೋಜನೆಗಳಿವೆ.

ದರ ಎಷ್ಟು?
ಈ ರೈಲು ರಾತ್ರಿ 8 ಗಂಟೆಗೆ ಪಾಟ್ನಾದಿಂದ ಹೊರಡುತ್ತದೆ. ನಂತರ ಮರುದಿನ ಬೆಳಿಗ್ಗೆ 7:30ಕ್ಕೆ ದೆಹಲಿಗೆ ತಲುಪುತ್ತದೆ. ಅನೇಕ ಸೌಲಭ್ಯಗಳನ್ನು ಹೊಂದಿರುವ ಈ ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಪ್ರಯಾಣಿಕರು ರಾಜಧಾನಿ ಎಕ್ಸ್‌ಪ್ರೆಸ್ ದರಗಳಿಗಿಂತ ಸುಮಾರು 10–15% ಹೆಚ್ಚು ಪಾವತಿಸಬೇಕಾಗುತ್ತದೆ. ಅದಕ್ಕೆ ಪ್ರತಿಯಾಗಿ, ಉತ್ತಮ ಸೌಕರ್ಯ, ಆಧುನಿಕ ಸೀಟ್‌ಗಳು ಮತ್ತು ವೇಗದ ಪ್ರಯಾಣವನ್ನು ಆನಂದಿಸಬಹುದಾಗಿದೆ. ಒಟ್ಟಾರೆಯಾಗಿ ಈ ಹೊಸ ರೈಲು ದೇಶದಲ್ಲಿ ರೈಲು ಪ್ರಯಾಣವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಯಾವಾಗ ಆರಂಭ?
ಗುಜರಾತ್‌ನ ಭಾವನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ವಂದೇ ಭಾರತ್ ಸ್ಲೀಪರ್ ಸೆಪ್ಟೆಂಬರ್‌ನಲ್ಲಿ ಪರಿಚಯವಾಗಲಿದೆ ಎಂದು ಘೋಷಿಸಿದ್ದರು. ಆದರೆ ನಿಖರ ದಿನಾಂಕ ಇನ್ನೂ ಪ್ರಕಟಗೊಂಡಿಲ್ಲ. ರೈಲ್ವೆ ಸಂಸ್ಥೆಗಳು ಸದ್ಯದಲ್ಲೇ ಈ ಮಾಹಿತಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಬೆಂಗಳೂರಿನ ಬಳಿ ವಂದೇ ಭಾರತ್ ಸ್ಲೀಪರ್ ಡಿಪೋ ಮತ್ತು ವರ್ಕ್‌ಶಾಪ್‌ ಸ್ಥಾಪಿಸಲಾಗುತ್ತಿದೆ. ಇದು 2026 ರ ಆರಂಭದ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ಪ್ರಸ್ತುತ, ಬೆಂಗಳೂರಿನ ಬಿಇಎಂಎಲ್‌ನಲ್ಲಿ ಐಸಿಎಫ್ ಸಹಯೋಗದೊಂದಿಗೆ 10 ಸ್ಲೀಪರ್ ರೈಲುಗಳನ್ನು ನಿರ್ಮಿಸಲಾಗುತ್ತಿದ್ದು, ಮುಂಬರುವ ವರ್ಷಗಳಲ್ಲಿ ಭಾರತದಾದ್ಯಂತ ಇಂತಹ ಹೆಚ್ಚಿನ ಸೇವೆಗಳನ್ನು ಖಚಿತಪಡಿಸುತ್ತದೆ.

ಎರಡನೇ ವಂದೇ ಭಾರತ್‌ ಸ್ಲೀಪರ್‌ ರೈಲು:
ಕೇರಳ ರಾಜ್ಯವು ಭಾರತದ ಎರಡನೇ ವಂದೇ ಭಾರತ್‌ ಸ್ಲೀಪರ್‌ ರೈಲನ್ನು ಹೊಂದಿರಲಿದೆ. ಇದು ಕರ್ನಾಟಕ ರಾಜ್ಯದ ಕರಾವಳಿ ಪಟ್ಟಣವಾದ ಮಂಗಳೂರು ಹಾಗೂ ಕೇರಳ ರಾಜಧಾನಿ ತಿರುವನಂತಪುರಂ ನಡುವೆ ಚಲಿಸಲಿದೆ. ಇದು ಮುಂದಿನ ವರ್ಷ ಹಳಿಗಳ ಮೇಲೆ ಓಡಲಿದೆ. ಇದಕ್ಕಾಗಿ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗಿದ್ದು, ಈ ಮಂಗಳೂರು- ತಿರುವನಂತಪುರಂ ಮಾರ್ಗದಲ್ಲಿ 3 ಸ್ಲೀಪರ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ಮಂಜೂರು ಮಾಡಲು ಸಂಸದ ರಾಘವನ್‌ ಮತ್ತು ಸಚಿವೆ ಅಶ್ವಿನಿ ವೈಷ್ಣವ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಮಂಗಳೂರು ಹಾಗೂ ತಿರುವನಂತಪುರಂ ನಡುವೆ ಈ ಆಧುನಿಕ ರೈಲು ಓಡಲಿದೆ. ಈ ಮಾರ್ಗದ ನಡುವೆ ವಂದೇ ಭಾರತ್‌ ಸ್ಲೀಪರ್ ರೈಲು ಸಂಚರಿಸಿದರೆ ಕೇರಳ ರಾಜ್ಯದ ಪ್ರವಾಸ ಮಾಡುವವರಿಗೆ ಮತ್ತಷ್ಟು ಸುಲಭವಾಗಲಿದೆ.