ಇಂಡೋನೇಷ್ಯಾ ವಿಮಾನ ದುರಂತ: ಭಾರತೀಯ ಕ್ಯಾಪ್ಟನ್ ಪೈಲಟ್ ಸಾವು

ಜಕಾರ್ತ: ಇಂಡೋನೇಷ್ಯಾದ ಲಯನ್ಸ್ ಏರ್‌‌ಲೈನ್ಸ್‌ ದುರಂತದಲ್ಲಿ ವಿಮಾನದ ಮುಖ್ಯ ಕ್ಯಾಪ್ಟನ್ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತದ ಭಾವ್ಯೆ ಸುನೆಜಾ ಮೃತಪಟ್ಟಿದ್ದಾರೆ.

ದುರಂತ ಸಂಭವಿಸಿದ ಲಯನ್ ಏರ್‌‌ಲೈನ್ಸ್‌ ಸಂಸ್ಥೆಯ ಜಿಟಿ610 ವಿಮಾನದ ಮುಖ್ಯ ಕ್ಯಾಪ್ಟನ್ ಪೈಲಟ್ ಆಗಿದ್ದ ಭಾರತದ ಭಾವ್ಯೆ ಸುನೆಜಾ ಅವರು ಮೃತಪಟ್ಟಿರುವುದಾಗಿ ಜಕಾರ್ತದ ಭಾರತೀಯ ರಾಯಭಾರಿ ಕಚೇರಿ ಅಧಿಕೃತವಾಗಿ ತಿಳಿಸಿದೆ.

ಮಾಹಿತಿಗಳ ಪ್ರಕಾರ ಸುನೆಜಾ 2011 ರಿಂದ ಲಯನ್ ಏರ್‌‌ಲೈನ್ಸ್‌ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮುಂಚೆ ಅವರು ಎಮಿರೇಟ್ಸ್ ವಿಮಾನ ಸಂಸ್ಥೆಯಲ್ಲಿ ತರಬೇತಿ ಪೈಲೆಟ್ ಆಗಿಯೂ ಸೇವೆ ಸಲ್ಲಿಸಿದ್ದರು. ಸುನೆಜಾರವರು ದೆಹಲಿ ಮೂಲದವರಾಗಿದ್ದು, ಪೂರ್ವ ದೆಹಲಿಯ ಮಯೂರ್ ವಿಹಾರ್ ದಲ್ಲಿನ ಅಹಲ್ಕಾನ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣ ಮುಗಿಸಿದ್ದರು.

ಮುಖ್ಯ ಪೈಲಟ್ ಆಗಿದ್ದ ಸುನೆಜಾ ಅವರಿಗೆ 6 ಸಾವಿರ ಗಂಟೆಯ ವಿಮಾನ ಹಾರಾಟ ನಡೆಸಿದ ಅನುಭವವಿತ್ತು. ಇದಲ್ಲದೇ ಇಂಡೋನೇಷ್ಯಾದ ಹಾರ್ವಿನೋದಲ್ಲಿ ಸಹ ಪೈಲಟರ್ ಆಗಿ 5,000 ಕ್ಕೂ ಅಧಿಕ ಗಂಟೆಯ ಅನುಭವವನ್ನು ಸಹ ಹೊಂದಿದ್ದರು ಎನ್ನುವ ಮಾಹಿತಿಯನ್ನು ಲಯನ್ ಏರ್‌‌ಲೈನ್ಸ್‌ ಸಂಸ್ಥೆ ತಿಳಿಸಿದೆ.

ಸುನೆಜಾ ಸಾವಿನ ಕುರಿತು ಜಕಾರ್ತ ಭಾರತೀಯ ರಾಯಭಾರಿ ಕಚೇರಿಯು ತನ್ನ ಟ್ವಿಟ್ಟರಿನಲ್ಲಿ, ಜಕಾರ್ತ ಬಳಿ ಲಯನ್ ಏರ್‌‌ಲೈನ್ಸ್‌ ವಿಮಾನ ದುರಂತದಲ್ಲಿ ಮೃತಪಟ್ಟವರ ಬಗ್ಗೆ ತೀವ್ರ ಸಂತಾಪವಿದೆ. ಆದರೆ ಘಟನೆಯಲ್ಲಿ ದುರದಷ್ಟಕರ ವಿಚಾರವೆಂದರೆ, ವಿಮಾನ ಚಲಾಯಿಸುತ್ತಿದ್ದ ಭಾರತೀಯ ಪೈಲಟ್ ಭವ್ಯೆ ಸುನೆಜಾ ಸಹ ದುರಂತದಲ್ಲಿ ಮೃತಪಟ್ಟಿದ್ದಾರೆ. ರಾಯಭಾರ ಕಚೇರಿಯು ರಕ್ಷಣಾ ಕೇಂದ್ರದ ಜೊತೆ ಸಂಪರ್ಕದಲ್ಲಿದ್ದು, ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದೆ ಎಂದು ಬರೆದುಕೊಂಡಿದೆ.

ಏನಿದು ವಿಮಾನ ದುರಂತ?
ಇಂದು ಬೆಳಗ್ಗೆ ರಾಜಧಾನಿ ಜಕಾರ್ತದಿಂದ ಪಾಂಗ್‍ಕಲ್ ಪಿನಾಗ್ ದ್ವೀಪಕ್ಕೆ ಲಯನ್ಸ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ಜಿಟಿ 610 ವಿಮಾನ ಎಂದಿನಂತೆ 6.20ರ ಸುಮಾರಿಗೆ ಟೇಕ್ ಆಫ್ ಆಗಿ ಹೊರಟಿತ್ತು. ಸುಮಾರು 7.30ರ ಹೊತ್ತಿಗೆ ಪಾಂಗ್‍ಕಲ್ ಪಿನಾಂಗ್ ತಲುಪಬೇಕಿತ್ತು. ಆದರೆ ಟೇಕಾಫ್ ಆದ 13 ನಿಮಿಷಗಳ ಬಳಿಕ ಏಕಾಏಕಿ ರೇಡಾರ್ ಸಂಪರ್ಕದಿಂದ ವಿಮಾನ ನಾಪತ್ತೆಯಾಗಿತ್ತು. ಅಲ್ಲದೇ ಕೊನೆಯ ಬಾರಿಗೆ ಜಿಟಿ610 ವಿಮಾನವು ಬೋಯಿಂಗ್ 737 ಮ್ಯಾಕ್ಸ್ 8 ಲಯನ್ ವಿಮಾನದ ಸಂಪರ್ಕಕ್ಕೆ 6.33ರಲ್ಲಿ ಯತ್ನಿಸಿತ್ತು. ಇದಾದ ಬಳಿಕ ಪಾಂಗ್‍ಕಲ್ ದ್ವೀಪದ ಬಳಿ ಸಮುದ್ರದಲ್ಲಿ ವಿಮಾನ ಪತನಗೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *