ಚಿತ್ರದುರ್ಗದಲ್ಲಿ ಪುಷ್ಪಕ್ ಆರ್‌ಎಲ್‍ವಿ ಸ್ಪೇಸ್‍ಶಿಪ್ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ

ತಿರುವನಂತಪುರಂ/ಚಿತ್ರದುರ್ಗ: ಚಳ್ಳಕೆರೆ ಬಳಿಯ ಎಟಿಆರ್‌ನಲ್ಲಿ (ಎರೋನೆಟಿಕಲ್ ಟೆಸ್ಟ್ ರೇಂಜ್) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಡೆಸಿದ ಪುಷ್ಪಕ್ ಆರ್‍ಎಲ್‍ವಿ (Pushpak RLV) ಲ್ಯಾಂಡಿಂಗ್ ಪ್ರಯೋಗ ಯಶಸ್ವಿಯಾಗಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಇಸ್ರೋ (ISRO) ಮಾಹಿತಿ ಹಾಗೂ ಸ್ಪೇಸ್‍ಶಿಪ್ ಲ್ಯಾಂಡಿಂಗ್‍ನ ವಿಡಿಯೋ ಹಂಚಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ (S.Somanath), ಪುಷ್ಪಕ್ ಆರ್‍ಎಲ್‍ವಿಯ ಪರೀಕ್ಷೆಯ ಭಾಗವಾಗಿ ವಾಯುಪಡೆಯ ಹೆಲಿಕಾಪ್ಟರ್‌ನಿಂದ ಸ್ಪೇಸ್‍ಶಿಪ್‍ನ್ನು ಬಿಡಲಾಯಿತು. ಬಳಿಕ ಇದು ನಿಖರವಾಗಿ ರನ್‍ವೇಯಲ್ಲಿ ಯಶಸ್ವಿಯಾಗಿ ಇಳಿಯಿತು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಾಲು ಸಾಲು ಆತ್ಮಹತ್ಯೆ- ಪ್ರತಿ ಮೆಟ್ರೋ ನಿಲ್ದಾಣದಲ್ಲೂ ಸ್ಕ್ರೀನ್ ಡೋರ್ ಅಳವಡಿಕೆಗೆ ಪ್ಲಾನ್

ಪುಷ್ಪಕ್‍ನ್ನು ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್‌ನಿಂದ ಮೇಲಕ್ಕೆತ್ತಲಾಯಿತು. ಬಳಿಕ 4.5 ಕಿಮೀ ಎತ್ತರದಿಂದ, 4 ಕಿ.ಮೀ ದೂರದಲ್ಲಿ ಇದನ್ನು ಬಿಡಲಾಯಿತು. ನಂತರ ಪುಷ್ಪಕ್ ಸ್ವಯಂಪ್ರೇರಿತವಾಗಿ ರನ್‍ವೇಯನ್ನು ಸಮೀಪಿಸಿ, ನಿಖರವಾಗಿ ಇಳಿಯಿತು. ಬಳಿಕ ರನ್‍ವೇಯಲ್ಲಿ ತನ್ನ ಬ್ರೇಕ್ ಪ್ಯಾರಾಚೂಟ್, ಲ್ಯಾಂಡಿಂಗ್ ಗೇರ್ ಬ್ರೇಕ್‍ಗಳು ಮತ್ತು ನೋಸ್ ವೀಲ್ ಸ್ಟೀರಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ನಿಲ್ಲುವಲ್ಲಿ ಯಶಸ್ವಿಯಾಯಿತು ಎಂದು ಇಸ್ರೋ ತಿಳಿಸಿದೆ.

ಇಂದಿನ ಪ್ರಯೋಗವು ಪುಷ್ಪಕ್‍ನ ಮೂರನೇ ಹಾರಾಟವಾಗಿದೆ. ಇದು ಹೆಚ್ಚು ಸಂಕೀರ್ಣ ಸಂದರ್ಭಗಳಲ್ಲಿ ಅದರ ರೊಬೊಟಿಕ್ ಲ್ಯಾಂಡಿಂಗ್ ಸಾಮಥ್ರ್ಯದ ಪರೀಕ್ಷೆಯ ಭಾಗವಾಗಿದೆ. ಪುಷ್ಪಕ್ ಕಾರ್ಯಾಚರಣೆಗೆ ಇನ್ನೂ ಕೆಲವು ವರ್ಷಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಪುಷ್ಪಕ್ ಭಾರತದ ಭವಿಷ್ಯದ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನವಾಗಿದೆ. ನವೀಕರಣಕ್ಕಾಗಿ ಉಪಗ್ರಹಗಳನ್ನು ಕಕ್ಷೆಯಿಂದ ವಾಪಸ್ ಪಡೆಯಲು ಇದು ನೆರವಾಗಲಿದೆ.

ಹ್ಯಾಕಾಇಸ್ರೋ ವಿಜ್ಞಾನಿಗಳ ತಂಡದಿಂದ ಬಾಹ್ಯಾಕಾಶ ನೌಕೆಯ ತಯಾರಿಕೆಯು 10 ವರ್ಷಗಳ ಹಿಂದೆ ಪ್ರಾರಂಭವಾಯಿತು. 6.5 ಮೀಟರ್ ಏರೋಪ್ಲೇನ್ ತರಹದ ಈ ಕ್ರಾಫ್ಟ್ 1.75 ಟನ್ ತೂಗುತ್ತದೆ. ಅದರ ಇಳಿಯುವಿಕೆಯ ಸಮಯದಲ್ಲಿ, ಸಣ್ಣ ಥ್ರಸ್ಟರ್‍ಗಳು ವಾಹನವು ಇಳಿಯಬೇಕಾದ ನಿಖರವಾದ ಸ್ಥಳಕ್ಕೆ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಈ ಯೋಜನೆಗೆ ಸರ್ಕಾರ 100 ಕೋಟಿಗೂ ರೂ.ಗೂ ಹೆಚ್ಚು ಹೂಡಿಕೆ ಮಾಡಿದೆ.

ಸ್ವದೇಶಿ ಬಾಹ್ಯಾಕಾಶ ನೌಕೆಯಾಗಿರುವ ಪುಷ್ಪಕ್ ಆರ್‍ಎಲ್‍ವಿ ಯಶಸ್ವಿ ಲ್ಯಾಂಡಿಂಗ್, ಚಂದ್ರಯಾನ-3, ಆದಿತ್ಯ ಎಲ್-1 ಯಶಸ್ಸಿನ ನಂತರದ ಇಸ್ರೋದ ಮಹತ್ವದ ಹೆಜ್ಜೆಯಾಗಿದೆ.

ಸಂಪತ್ತಿನ ಅಧಿಪತಿ ಕುಬೇರನ ವಾಹನ ಎಂದು ಕರೆಯಲ್ಪಡುವ ರಾಮಾಯಣದಲ್ಲಿ ಉಲ್ಲೇಖಿಸಲಾದ `ಪುಷ್ಪಕ ವಿಮಾನ’ದಿಂದ ಸ್ಪೇಸ್‍ಶಿಪ್‍ಗೆ ಈ ಹೆಸರನ್ನು ಇಡಲಾಗಿದೆ ಎಂದು ಈ ಹಿಂದೆ ಸೋಮನಾಥನ್ ಹೇಳಿದ್ದರು. ಇದನ್ನೂ ಓದಿ: ಏನಿದು ದೆಹಲಿ ಮದ್ಯ ಹಗರಣ? ಕೇಜ್ರಿವಾಲ್‌ ಮೇಲಿರುವ ಆರೋಪ ಏನು? ಬಂಧನವಾದ ಪ್ರಮುಖರು ಯಾರು?