ವಿಮಾನಯಾನದಲ್ಲಿ ವಿಶ್ವದಲ್ಲೇ 3ನೇ ಸ್ಥಾನಗಳಿಸಿದ ಭಾರತ

ನವದೆಹಲಿ: ವಿಮಾನಯಾನ ಪ್ರಯಾಣವನ್ನೇ ಅವಲಂಬಿಸಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿಯೇ ಮೂರನೇ ಸ್ಥಾನಗಳಿಸಿದೆ ಎಂದು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ(ಐಎಟಿಎ) ವರದಿ ನೀಡಿದೆ.

ಐಎಟಿಎಯು ವಿಶ್ವದಲ್ಲಿ ಯಾವ ಯಾವ ದೇಶದಲ್ಲಿ ಎಷ್ಟು ಜನ ವಿಮಾನಯಾನವನ್ನೇ ಅವಲಂಬಿಸಿದ್ದಾರೆ ಎನ್ನುವ ಕುರಿತು ವರದಿ ಬಿಡುಗಡೆ ಮಾಡುತ್ತಿರುತ್ತದೆ. ಈ ಕುರಿತು ಗುರುವಾರ ಪ್ರಕಟಿಸಿರುವ 2017ರ ವರದಿಯ ಪ್ರಕಾರ  ಭಾರತ ವಿಶ್ವದಲ್ಲಿಯೇ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಐಎಟಿಎ ವರದಿಯ ಪ್ರಕಾರ ವಿಶ್ವಾದ್ಯಂತ ಒಟ್ಟು 400 ಕೋಟಿ ಜನ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಪ್ರಯಾಣವನ್ನು ಬೆಳೆಸಿದ್ದು, ಇದರಲ್ಲಿ ಮೊದಲನೇ ಸ್ಥಾನದಲ್ಲಿ ಅಮೆರಿಕಾದ ಒಟ್ಟು 63.2 ಕೋಟಿ ಪ್ರಯಾಣಿಕರು, ಎರಡನೇ ಸ್ಥಾನದಲ್ಲಿ ಚೀನಾದ 55.5 ಕೋಟಿ ಪ್ರಯಾಣಿಕರು ಹಾಗೂ ಮೂರನೇ ಸ್ಥಾನದಲ್ಲಿ ಭಾರತದ 16.1 ಕೋಟಿ ಪ್ರಯಾಣಿಕರು ಸಂಚಾರ ಮಾಡಿರುವುದು ವರದಿಯಾಗಿದೆ. ನಂತರದ ಸ್ಥಾನಗಳಲ್ಲಿ ಯುಕೆ 14.7 ಕೋಟಿ ಹಾಗೂ ಜರ್ಮನಿ 11.4 ಕೋಟಿ ಪ್ರಯಾಣಿಕರೊಂದಿಗೆ 4 ಮತ್ತು 5ನೇ ಸ್ಥಾನವನ್ನು ಗಳಿಸಿಕೊಂಡಿದೆ.

ವರದಿಗಳ ಪ್ರಕಾರ ಕಳೆದ 47 ತಿಂಗಳುಗಳಲ್ಲಿ ಭಾರತದ ದೇಶಿಯ ವಿಮಾನಯಾನದ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದೆ. ಭಾರತದ ದೇಶಿಯ ವಿಮಾನಯಾನ ಪ್ರಯಾಣಿಕರ ಸಂಖ್ಯೆಯನ್ನು ಆರ್‍ಪಿಕೆ(ರೆವಿನ್ಯೂ ಪ್ಯಾಸೆಂಜರ್ ಕಿಲೋಮೀಟರ್)ಯೊಂದಿಗೆ ಲೆಕ್ಕ ಹಾಕಿದರೆ, ಆಸ್ಟ್ರೇಲಿಯಾ, ಬ್ರೆಜಿಲ್, ಚೀನಾ, ಜಪಾನ್, ರಷ್ಯಾ ಹಾಗೂ ಯುಎಸ್ ಗಳಿಗಿಂತಲೂ ಅಧಿಕವಾಗಿದೆ ಎಂದು ಐಎಟಿಎ ವರದಿ ನೀಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *