ಬೆಂಗಳೂರು: ಭಾರತದಲ್ಲಿ ಕಾಂಡೋಮ್ ಬಳಕೆಯ ಮೇಲಿನ ವೆಚ್ಚ ಕಡಿಮೆ ಇದ್ದರೂ, ಆದರೆ ಕೇವಲ ಶೇಕಡಾ 5ರಷ್ಟು ಜನರು ಮಾತ್ರ ಜನನ ಪ್ರಮಾಣ ತಗ್ಗಿಸಲು ನಿರೋಧ ಬಳಕೆ ಮಾಡುತ್ತಾರೆ. ಹೀಗಾಗಿ ಆನ್‍ಲೈನ್ ನಲ್ಲಿ ಕಾಂಡೋಮ್ ಉಚಿತ ಮಾರಾಟ ಮಳಿಗೆಯನ್ನು ಆರಂಭಿಸಲಾಗಿತ್ತು.
ಏಪ್ರಿಲ್ 28ರಂದು ಆರಂಭವಾದ ಆನ್‍ಲೈನ್ ಮಳಿಗೆಗೆ ಏಡ್ಸ್ ಹೆಲ್ತ್ ಕೇರ್ ಫೌಂಡೇಶನ್ 9.56 ಲಕ್ಷ ಕಾಂಡೋಮ್ ಗಳ ಪೂರೈಕೆಯನ್ನು ಮಾಡಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಅಂಕಿ ಅಂಶಗಳ ಪ್ರಕಾರ ಒಟ್ಟಾರೆ 10 ಲಕ್ಷ ಕಾಂಡೋಮ್ ಗಳಲ್ಲಿ ಕೆಲವೊಂದು ಸಮುದಾಯ ಮತ್ತು ಎನ್‍ಜಿಓ ಗಳು 5.14 ಲಕ್ಷ ನಿರೋಧನ್ನು ಖರೀದಿ ಮಾಡಿವೆ. ಇನ್ನುಳಿದ 4.41 ಲಕ್ಷ ಕಾಂಡೋಮ್ ಗಳನ್ನು ವೈಯಕ್ತಿಕವಾಗಿ ಸಾಮಾನ್ಯ ಜನರು ಬುಕ್ ಮಾಡಿದ್ದು, ಇದರಲ್ಲಿ ಕರ್ನಾಟಕ ಮತ್ತು ದೆಹಲಿ ರಾಜ್ಯಗಳದ್ದು ಸಿಂಹಪಾಲು ಇದೆ ಎಂದು ವರದಿಯಾಗಿದೆ.

ಈ ಉಚಿತ ಕಾಂಡೋಮ್ ಫೌಂಡೇಶನ್ ಮಾರಾಟ ಮಳಿಗೆ ಹಿಂದೂಸ್ತಾನ್ ಲೇಟೆಕ್ಸ್ ಲಿಮಿಟೆಡ್ (ಹೆಚ್‍ಎಲ್‍ಎಲ್) ಸಹಭಾಗಿತ್ವದಲ್ಲಿ ನಡೆಯುತ್ತಿದೆ. 10 ಲಕ್ಷ ಕಾಂಡೋಮ್ ಗಳನ್ನು ಡಿಸೆಂಬರ್ ವರಗೆ ಮಾರಟ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಜುಲೈ ಮೊದಲ ವಾರದಲ್ಲೇ ಎಲ್ಲ ಕಾಂಡೋಮ್ ಗಳ ಮಾರಾಟವಾಯಿತು. ಹಾಗಾಗಿ ಮತ್ತೆ 20 ಲಕ್ಷ ಕಾಂಡೋಮ್ ಗಳನ್ನು ಆರ್ಡರ್ ಮಾಡಲಾಗಿದ್ದು, ನವೆಂಬರ್ ಮೊದಲ ವಾರದಲ್ಲಿ ನಮಗೆ ತಲುಪಿವೆ. ಜನವರಿ ತಿಂಗಳಿಗಾಗಿ 50 ಲಕ್ಷ ಕಾಂಡೋಮ್ ಗಳ ಆರ್ಡರ್ ಮಾಡಲಾಗುವುದು ಎಂದು ಫೌಂಡೇಶನ್ ಕಾರ್ಯಕ್ರಮದ ನಿರ್ದೇಶಕ ಡಾ.ವಿ.ಶ್ಯಾಮ್ ಪ್ರಸಾದ್ ತಿಳಿಸಿದ್ದಾರೆ.
ಯಾಕಿಷ್ಟು ಬೇಡಿಕೆ?: ಹೆಚ್ಚಿನ ಭಾರತೀಯರು ಅಂಗಡಿಗಳಿಗೆ ಹೋಗಿ ಕಾಂಡೋಮ್ ಖರೀದಿ ಮಾಡಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಆನ್‍ಲೈನ್ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಗ್ರಾಹಕರು ಆರ್ಡರ್ ಮಾಡಿರುವ ಕಾಂಡೋಮ್ ಸಂಪೂರ್ಣವಾಗಿ ಪ್ಯಾಕ್ ಆಗಿ ಬರುತ್ತದೆ. ಇದರಿಂದ ಡೆಲಿವಿರಿ ಬಾಯ್ ಗೆ ತಾವು ಗ್ರಾಹಕರಿಗೆ ನೀಡುತ್ತಿರುವ ವಸ್ತು ಯಾವುದು ಎಂದು ಗೊತ್ತಿರುವುದಿಲ್ಲ. ಹೀಗಾಗಿ ಗ್ರಾಹಕರು ಕಾಂಡೋಮ್ ಖರೀದಿಸುವಾಗ ಮುಜುಗುರ ಪಡುವುದು ತಪ್ಪುತ್ತದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

ಇತ್ತೀಚಿನ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ ಪ್ರಕಾರ, ಕೇವಲ ಶೇಕಡಾ 5.6ರಷ್ಟು ಜನರು ಮಾತ್ರ ಜನನ ನಿಯಂತ್ರಣಕ್ಕಾಗಿ ಕಾಂಡೋಮ್ ಬಳಕೆ ಮಾಡುತ್ತಾರೆ. ಕರ್ನಾಟಕದಲ್ಲಿ ಕೇವಲ ಶೇಕಡಾ 1.7 ರಷ್ಟು ಜನರು ನಿರೋಧ ಬಳಸಿದರೆ, ಬೆಂಗಳೂರಿನಲ್ಲಿ ಶೇ.3.6ರಷ್ಟು ಬಳಕೆ ಮಾಡುತ್ತಾರೆ. ಕೋಲ್ಕತ್ತಾ ಮತ್ತು ದೆಹಲಿಯಲ್ಲಿ ಕ್ರಮವಾಗಿ ಶೇ.19 ಹಾಗು ಶೇ.10 ರಷ್ಟು ನಿರೋಧ ಬಳಕೆಯಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಂಡೋಮ್ ಬಳಕೆಯ ಬಗ್ಗೆ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಸೆಕ್ಸ್ ವರ್ಕರ್ ಹಾಗು ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡುಗುವವರಲ್ಲಿ ಕಾಂಡೋಮ್ ಬಳಕೆಯನ್ನು ಹೆಚ್ಚಿಸುವಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೋ) ಪ್ರಯತ್ನಿಸುತ್ತಿದೆ.



Leave a Reply