2 ಮಾವಿನ ಹಣ್ಣು ಕಳವು- ದುಬೈ ಕೋರ್ಟ್‌ನಲ್ಲಿ ಭಾರತ ಮೂಲದ ವ್ಯಕ್ತಿಯ ವಿಚಾರಣೆ

ದುಬೈ: ಎರಡು ಮಾವು ಕದ್ದ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ದುಬೈನಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

27 ವರ್ಷದ ಭಾರತದ ಮೂಲದ ಯುವಕ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದನು. ಕಾರ್ಯನಿರ್ವಹಿಸುತ್ತಿರುವ ವೇಳೆ 2017ರಲ್ಲಿ ಭಾರತಕ್ಕೆ ಸರಕು ಸಾಗಿಸುವ ವೇಳೆ 6 ದಿರ್ಹಾಮ್ಸ್(116 ರೂ.) ಬೆಲೆಯ ಮಾವಿನ ಹಣ್ಣನ್ನು ಕದ್ದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

ಆ ಸಮಯದಲ್ಲಿ ನನಗೆ ತುಂಬಾ ಬಾಯಾರಿಕೆಯಾಗಿತ್ತು. ಕುಡಿಯಲು ನೀರು ಹುಡುಕುತ್ತಿದ್ದಾಗ ಈ ಹಣ್ಣುಗಳ ಪೆಟ್ಟಿಗೆ ಕಾಣಿಸಿತು. ಅದರಲ್ಲಿದ್ದ ಎರಡು ಮಾವಿನ ಹಣ್ಣುಗಳನ್ನು ತೆಗೆದುಕೊಂಡೆ ಎಂದು ಅಲ್ಲಿನ ಪತ್ರಿಕೆಗೆ ತಿಳಿಸಿದ್ದಾನೆ. ಕಳೆದ ವರ್ಷ ಏಪ್ರಿಲ್‍ನಲ್ಲಿ ಈ ಕುರಿತು ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದರು. ನಂತರ ಆತನನ್ನು ಬಂಧಿಸಿ, ಹಣ್ಣುಗಳನ್ನು ಕದ್ದಿರುವ ಕುರಿತು ಆರೋಪ ಹೊರಿಸಲಾಗಿತ್ತು.

ಆಗಸ್ಟ್ 2017ರಲ್ಲಿ ಹಣ್ಣುಗಳನ್ನು ಕದ್ದು ತಿಂದಿದ್ದರ ಕುರಿತು ದಾಖಲೆಗಳಿಂದ ದೃಢಪಟ್ಟಿದೆ. ಆದರೆ ತಡವಾಗಿ 2019ರಲ್ಲಿ ನ್ಯಾಯಾಲಯಕ್ಕೆ ಏಕೆ ಹಾಜಪಡಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಹಣ್ಣುಗಳ ಬಾಕ್ಸ್ ತೆರೆಯುವುದಕ್ಕೂ ಮುನ್ನ ಭದ್ರತಾ ಸಿಬ್ಬಂದಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದ. ನಂತರ ಭಾರತಕ್ಕೆ ಹೊರಟಿದ್ದ ವಿಮಾನದ ಪ್ರಯಾಣಿಕರ ಬ್ಯಾಗ್ ತೆರೆದು ಮಾವಿನ ಹಣ್ಣುಗಳನ್ನು ಕದ್ದಿದ್ದ ಎಂದು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ತಿಳಿಸಿದ್ದಾರೆ.

ಆರೋಪಿಯು ತಪ್ಪಿತಸ್ಥನೆಂದು ಸಾಬೀತಾದರೆ, ಅವನು ಜೈಲು ಶಿಕ್ಷೆಯನ್ನು ಎದುರಿಸಬೇಕಾಗಬಹುದು ಇಲ್ಲವೆ ಕದ್ದ ವಸ್ತುಗಳ ಮೊತ್ತವನ್ನು ಸಮಾನ ದಂಡದೊಂದಿಗೆ ಪಾವತಿಸಬೇಕಾಗುತ್ತದೆ. ಸೆಪ್ಟೆಂಬರ್ 23ರಂದು ಪ್ರಕರಣದ ತೀರ್ಪು ಹೊರಬೀಳಬಹುದು ಎಂದು ನಿರೀಕ್ಷಿಸಲಾಗಿದೆ.

Comments

Leave a Reply

Your email address will not be published. Required fields are marked *