ಅಫ್ಘಾನಿಸ್ತಾನಲ್ಲಿ ಭಾರತ – ತಾಲಿಬಾನ್ ಆಡಳಿತದ ಜೊತೆ ಮೊದಲ ಮಾತುಕತೆ

ಕಾಬೂಲ್: ಅಫ್ಘಾನಿಸ್ತಾನವನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ವಶಪಡಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಭಾರತದ ನಿಯೋಗ ಹಾಗೂ ತಾಲಿಬಾನ್ ಶುಕ್ರವಾರ ಭೇಟಿಯಾಗಿವೆ.

ಅಫ್ಘಾನಿಸ್ತಾನದಲ್ಲಿ ಹಳೆ ಸರ್ಕಾರ ಪತನಗೊಂಡು ತಾಲಿಬಾನ್ ಹಿಡಿತ ಸಾಧಿಸಿದ ಸಂದರ್ಭ ಭಾರತೀಯ ಮಿಷನ್ ಸಿಬ್ಬಂದಿ ಅಲ್ಲಿಂದ ಭಾರತಕ್ಕೆ ಹಿಂತಿರುಗಿದ್ದರು.

ಇಂದು ಹಿರಿಯ ರಾಜತಾಂತ್ರಿಕ ಜೆಪಿ ಸಿಂಗ್ ನೇತೃತ್ವದ ತಂಡ ಕಾಬೂಲ್‌ನಲ್ಲಿ ಹಿರಿಯ ತಾಲಿಬಾನ್ ನಾಯಕ ಅಮೀರ್ ಖಾನ್ ಮೊಟ್ಟಕಿ ಅವರನ್ನು ಭೇಟಿಯಾದರು. ಮೂಲಭೂತ ಅಗತ್ಯಗಳಿಗಾಗಿ ಹೆಣಗಾಡುತ್ತಿದ್ದ ಅಫ್ಘಾನಿಸ್ತಾನದ ಜನರಿಗೆ ಭಾರತ ನೀಡುವ ಮಾನವೀಯ ನೆರವಿನ ಬಗ್ಗೆ ಚರ್ಚೆ ನಡೆದಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ 2 ಪ್ರತ್ಯೇಕ ಸ್ಥಳಗಳಲ್ಲಿ ಗುಂಡಿನ ದಾಳಿ- ಮೂವರು ಸಾವು

ಭಾರತ ತನ್ನ ಸ್ಥಗಿತಗೊಳಿಸಿದ ಯೋಜನೆಗಳನ್ನು ಪುನರಾರಂಭಿಸಲು, ರಾಜತಾಂತ್ರಿಕ ಉಪಸ್ಥಿತಿಯನ್ನು ಮತ್ತೆ ಸಕ್ರಿಯಗೊಳಿಸಲು ಹಾಗೂ ಅಫ್ಘಾನಿಸ್ತಾನದ ಜನರಿಗೆ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ರೋಗಿಗಳಿಗೆ ಸೇವೆಗಳನ್ನು ನೀಡಲು ಬಯಸುತ್ತದೆ. ವ್ಯಾಪಾರದಲ್ಲಿಯೂ ಅಫ್ಘಾನಿಸ್ತಾನದೊಂದಿಗೆ ಕೆಲಸ ಮಾಡಲು ತಾಲಿಬಾನ್ ಭಾರತವನ್ನು ಕೇಳಿಕೊಂಡಿದೆ ಎಂದು ಹೇಳಿದರು.

ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿದ್ದ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಗಸ್ಟ್ 15 ರ ಬಳಿಕ ಭಾರತ ಮೂಲದ ಅಧಿಕಾರಿಗಳನ್ನು ಮರಳಿ ಕರೆತರಲು ನಿರ್ಧರಿಸಲಾಯಿತು. ಆದರೂ ಸ್ಥಳೀಯ ಸಿಬ್ಬಂದಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿ, ಅಲ್ಲಿನ ಸರಿಯಾದ ನಿರ್ವಹಣೆ ಬಗ್ಗೆ ಮಾಹಿತಿ ನೀಡುತ್ತಿದ್ದರು ಎಂದು ಬಾಗ್ಚಿ ತಿಳಿಸಿದರು. ಇದನ್ನೂ ಓದಿ: ತಿಂಗಳ ಅಂತ್ಯದಲ್ಲಿ ಸೌದಿಗೆ ಭೇಟಿ ನೀಡಲಿದ್ದಾರೆ ಬೈಡನ್

ಅಫ್ಘಾನಿಸ್ತಾನದಲ್ಲಿ ಭಾರತದ ನೆರವಿನ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಹಲವಾರು ಸ್ಥಳಗಳಿಗೆ ಭೇಟಿ ನೀಡಲು ಭಾರತೀಯ ತಂಡ ಪ್ರಯತ್ನಿಸಲಿದೆ. ಆದರೆ ತಂಡದ ಸಂಯೋಜನೆ, ಪ್ರವಾಸದ ಅವಧಿ, ಭೇಟಿ ನೀಡಬೇಕಾದ ಸ್ಥಳಗಳು ಮತ್ತು ನಿಗದಿತ ಸಭೆಗಳ ವಿವರಗಳನ್ನು ನೀಡಿಲ್ಲ.

Comments

Leave a Reply

Your email address will not be published. Required fields are marked *