ಇನ್ಮುಂದೆ ಬ್ರಿಟಿಷ್ ಗೌನ್ ಕ್ಯಾನ್ಸಲ್- ಹೊಸ ಡ್ರೆಸ್ ಸ್ಟೈಲ್‍ನಲ್ಲಿ ವಿಶ್ವವಿದ್ಯಾಲಯದ ಘಟಿಕೋತ್ಸವ

ನವದೆಹಲಿ: ವಿಶ್ವವಿದ್ಯಾಲಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಸ್ವೀಕರಿಸುವಾಗ ಇಂದಿಗೂ ಬ್ರಿಟಿಷ್ ಗೌನ್ ಹಾಕಲಾಗುತ್ತಿದೆ. ಹೀಗಾಗಿ ಗೌನ್ ಬದಲಾಗಿ ಸ್ವದೇಶಿ ನಿರ್ಮಿತ ಕುರ್ತಾ ಬಳಸಬೇಕು ಅಂತ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದೆ.

ಕುರ್ತಾ ಡಿಸೈನ್ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದು, ವಿದ್ಯಾರ್ಥಿಗಳಿಂದ ಡಿಸೈನ್ ಬಂದ ಮೇಲೆ ಉನ್ನತವಾದ ಕುರ್ತಾವನ್ನು ಅಂತಿಮವಾಗಿ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿರುವುದಾಗಿ ವರದಿಯಾಗಿದೆ.

ಕಳೆದ ತಿಂಗಳಷ್ಟೇ ದೆಹಲಿಯಲ್ಲಿ ನಡೆದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಸಭೆಯಲ್ಲಿ ಗೌನ್ ಸಂಸ್ಕೃತಿಯು ಬ್ರಿಟಿಷ್ ವಸಾಹತು ಶಾಹಿಯ ಪ್ರತಿರೂಪವಾಗಿದೆ ಎನ್ನುವ ಒಮ್ಮತ ಅಭಿಪ್ರಾಯ ಮೂಡಿಬಂದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲು ಮುಂದಾಗಿತ್ತು. ಅಲ್ಲದೇ ಶೀಘ್ರದಲ್ಲಿಯೇ ದೇಶದ ಎಲ್ಲಾ ವಿಶ್ವ ವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಯಾವ ರೀತಿಯ ಉಡುಪು ಧರಿಸಬೇಕು ಎನ್ನುವುದರ ಬಗ್ಗೆ ಸೂಚನೆಯನ್ನು ನೀಡಲಾಗುವುದು ಎಂದು ತಿಳಿಸಿತ್ತು.

ದೇಶದಲ್ಲಿ 800 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಇದ್ದು, 40 ಸಾವಿರಕ್ಕೂ ಹೆಚ್ಚು ಶಿಕ್ಷಣದ ಸಂಸ್ಥೆಗಳಲ್ಲಿ 3ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕುರ್ತಾ ಬಳಸುವ ಮೂಲಕ ಮೇಕ್ ಇನ್ ಇಂಡಿಯಾಗೆ ಒತ್ತು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ತಿಳಿಸಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ಮುಂಬೈಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಘಟಿಕೋತ್ಸವದ ವೇಳೆ ವಿದ್ಯಾರ್ಥಿಗಳು ಖಾದಿ ವಸ್ತ್ರಗಳನ್ನು ಧರಿಸಿ ಬಂದಿದ್ದರು.

Comments

Leave a Reply

Your email address will not be published. Required fields are marked *