ತಮ್ಮೊಳಗಿನ ಛಾಯಾಗ್ರಾಹಕನಿಗೆ ಕೆಲಸ ನೀಡಿ ಅಭಿಮಾನಿಗಳ ಮನ ಗೆದ್ದ ಧೋನಿ

ನವದೆಹಲಿ: ಮುಂದಿನ ತಿಂಗಳು ಐಪಿಎಲ್ ಟೂರ್ನಿ ಮೂಲಕ ಕ್ರಿಕೆಟ್‍ಗೆ ಮರಳಲಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಇತ್ತೀಚೆಗೆ ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಧೋನಿ ತಮ್ಮೊಳಗಿನ ಛಾಯಾಗ್ರಾಹಕನಿಗೆ ಕೆಲಸ ನೀಡಿ, ಅಭಿಮಾನಿಗಳ ಮನ ಗೆದ್ದಿದ್ದಾರೆ.

ಎಂ.ಎಸ್.ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಕಳೆದ ತಿಂಗಳು ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದರು. ಎಂಎಸ್ ಧೋನಿ ಅವರು ರಾಷ್ಟ್ರೀಯ ಉದ್ಯಾನವನದ ಭೇಟಿ ಅತ್ಯುತ್ತಮವಾಗಿತ್ತು ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ವಿವರಿಸಿದ್ದಾರೆ. ಜೊತೆಗೆ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ ರಾಷ್ಟ್ರೀಯ ಪ್ರಾಣಿ ಹುಲಿಯ ಫೋಟೋವನ್ನು ಧೋನಿ ಹಂಚಿಕೊಂಡಿದ್ದಾರೆ.

https://www.instagram.com/p/B8i2DhXlwW0/

‘ಹುಲಿಯೊಂದನ್ನು ಕಣ್ಣೆದುರು ಕಂಡಾಗ, ಅದು ಕೆಲ ಫೋಟೋ ತೆಗೆದುಕೊಳ್ಳುವವರೆಗೂ ಸಮಯ ನೀಡಿದಾಗ ಖುಷಿಯಾಗುತ್ತದೆ. ಕಾನ್ಹಾ ಭೇಟಿ ಅತ್ಯುತ್ತಮವಾಗಿತ್ತು ಎಂದು ಧೋನಿ ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳೊಬ್ಬರು ಎಂ.ಎಸ್.ಧೋನಿ ಅವರನ್ನು ಹುಲಿ ಎಂದು ಕರೆದಿದ್ದಾರೆ.

ಎಂ.ಎಸ್.ಧೋನಿ, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹೆಚ್ಚು ಫೋಟೋಗಳನ್ನು ಶೇರ್ ಮಾಡುವುದಿಲ್ಲ. ಆದರೆ ಅವರು ಪೋಸ್ಟ್ ಮಾಡಿದ ಫೋಟೋ ಅಥವಾ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿಗುತ್ತವೆ. ಎಂ.ಎಸ್.ಧೋನಿ ಅವರು ಕೊನೆಯದಾಗಿ ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ಆರ್.ಪಿ.ಸಿಂಗ್ ಹಾಗೂ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರೊಂದಿಗೆ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದ ವಿಡಿಯೋ ಹಾಗೂ ಫೋಟೋ ಹಂಚಿಕೊಂಡಿದ್ದರು.

https://www.instagram.com/p/B7EVRdDlPDl/

2019ರ ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್‍ನಿಂದ ವಿರಾಮ ತೆಗೆದುಕೊಂಡ ಎಂ.ಎಸ್.ಧೋನಿ, ಐಪಿಎಲ್ ಮೂಲಕ ಕ್ರಿಕೆಟ್‍ಗೆ ಎಂಟ್ರಿ ಕೊಡಲಿದ್ದಾರೆ. ಮಾರ್ಚ್ 29ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ಎಂಎಸ್ ಧೋನಿ ಮುಂದಿನ ತಿಂಗಳು ಮತ್ತೆ ಮೈದಾನಕ್ಕೆ ಬರಲಿದ್ದಾರೆ.

ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ಧೋನಿ, ತಂಡಕ್ಕೆ ಮೂರು ಬಾರಿ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ಕಳೆದ ಬಾರಿಯೂ ಸೂಪರ್ ಕಿಂಗ್ಸ್ ಫೈನಲ್ ತಲುಪಿತ್ತಾದರೂ ನಾಲ್ಕು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರು ನಿರಾಸೆ ಅನುಭವಿಸಿತ್ತು.

Comments

Leave a Reply

Your email address will not be published. Required fields are marked *