800 ಅಡಿ ಆಳದ ಕಂದಕಕ್ಕೆ ಬಿದ್ದು ಭಾರತೀಯ ಟೆಕ್ಕಿ ದಂಪತಿ ದುರ್ಮರಣ

ನ್ಯೂಯಾರ್ಕ್: ಭಾರತೀಯ ಟೆಕ್ಕಿ ದಂಪತಿ 800 ಅಡಿ ಆಳದ ಕಡಿದಾದ ಭೂ ಪ್ರದೇಶದಿಂದ ಬಿದ್ದು ಮೃತಪಟ್ಟಿರುವ ಘಟನೆ ಕ್ಯಾಲಿಫೋರ್ನಿಯಾದ ಯೊಸೆಮೈಟ್ ನ್ಯಾಷನಲ್ ಪಾರ್ಕ್ ನಲ್ಲಿ ನಡೆದಿದೆ.

ವಿಷ್ಣು ವಿಶ್ವನಾಥ್(29) ಮತ್ತು ಮೀನಾಕ್ಷಿ ಮೂರ್ತಿ(30) ಮೃತ ಟೆಕ್ಕಿ ದಂಪತಿ. ಯೋಸೆಮೈಟ್ ನ್ಯಾಷನಲ್ ಪಾರ್ಕ್ ನಲ್ಲಿ ಟಾಫ್ಟ್ ಪಾಯಿಂಟ್ ನಿಂದ ಬಿದ್ದು ಮೃತಪಟ್ಟಿದ್ದಾರೆ. ಅಕ್ಟೋಬರ್ 25 ರಂದು ಇವರಿಬ್ಬರು ಕಂದಕಕ್ಕೆ ಬಿದ್ದಿದ್ದು, ಸೋಮವಾರ ಇವರ ಗುರುತು ಪತ್ತೆಯಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಸಿಸ್ಕೋ ಕಂಪನಿಯಲ್ಲಿ ವಿಷ್ಣು ವಿಶ್ವನಾಥ್ ಅವರಿಗೆ ಸಿಸ್ಟಂ ಎಂಜಿನಿಯರ್ ಉದ್ಯೋಗ ಸಿಕ್ಕಿದ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ನಲ್ಲಿ ನೆಲೆಸಿದ್ದ ದಂಪತಿ ಕೆಲ ದಿನಗಳ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೆಲೆಸಿದ್ದರು. ಸಾಹಸ ಪ್ರವೃತ್ತಿ ಬೆಳೆಸಿಕೊಂಡಿದ್ದ ಈ ದಂಪತಿ ಹಲವು ದೇಶಗಳನ್ನು ಸುತ್ತಿದ್ದು, ತಮ್ಮ ಪ್ರವಾಸ ಕಥನವನ್ನು Holidays and HappilyEverAfters ಎಂಬ ಬ್ಲಾಗ್ ನಲ್ಲಿ ಬರೆಯುತ್ತಿದ್ದರು.

ಈ ದಂಪತಿ ಯೊಸೆಮೈಟ್ ವ್ಯಾಲಿ, ಯೊಸೆಮೈಟ್ ಫಾಲ್ಸ್ ಮತ್ತು ಎಲ್ ಕ್ಯಾಪಿಟನ್ ನಂತಹ ಅದ್ಭುತ ಸ್ಥಳಗಳನ್ನು ವೀಕ್ಷಣೆ ಮಾಡಿ ಕೊನೆಗೆ ಜನಪ್ರಿಯ ಪ್ರವಾಸಿ ತಾಣವಾದ ಟಾಫ್ಟ್ ಪಾಯಿಂಟ್ ಗೆ ಹೋಗಿದ್ದರು. ಈ ದಂಪತಿ ಮೇಲಿನಿಂದ ಬಿದ್ದಿದ್ದು ಹೇಗೆ ಎನ್ನುವುದರ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳವಾದ ಕಾರಣ ಫೋಟೋ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ ಅಂತ ಪಾರ್ಕ್ ವಕ್ತಾರ ಜೇಮೀ ರಿಚರ್ಡ್ಸ್ ಅವರು ಹೇಳಿದ್ದಾರೆ.

ಪೊಲೀಸರಿಗೆ ಅಕ್ಟೋಬರ್ 25 ರಂದು ಪ್ರವಾಸಿಗರಿಬ್ಬರು ಟಾಫ್ಟ್ ಪಾಯಿಂಟ್ ನಿಂದ ಸುಮಾರು 800 ಅಡಿಯಿಂದ ಬಿದ್ದಿದ್ದಾರೆ ಎಂದು ಮಾಹಿತಿ ತಿಳಿದಿದೆ. ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪಾರ್ಕ್ ರೇಂಜರ್ಸ್ ತಾಂತ್ರಿಕ ಕ್ಲೈಂಬಿಂಗ್ ಮತ್ತು ರ್ಯಾಪ್ಲಿಂಗ್ ಜೊತೆಗೆ ಹೆಲಿಕಾಪ್ಟರ್ ಸಹಾಯವನ್ನು ಪಡೆದು ಕಾರ್ಯಾಚರಣೆ ನಡೆಸಿದ್ದಾರೆ. ಕೊನೆಗೆ ಗುರುವಾರ 800 ಅಡಿ ಆಳದ ಕಡಿದಾದ ಭೂ ಪ್ರದೇಶದಲ್ಲಿ ಇವರ ಮೃತದೇಹ ಪತ್ತೆಯಾಗಿದೆ.

ಈ ಜೋಡಿಯು 2014ರಲ್ಲಿ ವಿವಾಹವಾಗಿದ್ದು, ಇಬ್ಬರು ಸಾಫ್ಟ್ ವೇರ್ ಇಂಜಿನಿಯರ್ ಗಳು ಎಂದು ವರದಿಯಾಗಿದೆ. ವಿಷ್ಣು ವಿಶ್ವನಾಥ್ ಅವರ ಫೇಸ್ ಬುಕ್ ನಲ್ಲಿ ಇಬ್ಬರು ಕಣಿವೆಯಲ್ಲಿ ಬಂಡೆಯ ಅಂಚಿನಲ್ಲಿ ಫೋಟೋ ತೆಗೆದುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇಬ್ಬರು ಕೇರಳದ ಚೆಂಗನ್ನೂರು ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, 2006-10 ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಪದವಿಯನ್ನು ಒಟ್ಟಿಗೆ ಓದಿದ್ದರು.

ಈ ದಂಪತಿ ಆರು ತಿಂಗಳುಗಳ ಹಿಂದೆ ಸಿಸ್ಕೊದಲ್ಲಿ ಕೆಲಸ ತೆಗೆದುಕೊಂಡಿದ್ದು, ಕ್ಯಾಲಿಫೋರ್ನಿಯದಲ್ಲಿ ಒಂದು ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲ ವಾಸಿಸಬೇಕೆಂದು ಬಯಸಿದ್ದರು ಅಂತ ವರದಿ ಆಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *