ದೇಶಿಯ ತಳಿಯ ಗೋವಿನ ಹಾಲಿನಲ್ಲಿ ಚಿನ್ನ ಇರುತ್ತೆ: ಬಿಜೆಪಿ ಮುಖಂಡ

– ಬೀಫ್ ತಿನ್ನುವ ಬುದ್ಧಿಜೀವಿಗಳು ನಾಯಿಯನ್ನೂ ತಿನ್ನಲಿ

ಕೋಲ್ಕತ್ತಾ: ಗೋ ಮಾಂಸ (ಬೀಫ್) ತಿನ್ನುವ ಕೆಲ ಬುದ್ಧಿಜೀವಿಗಳು ನಾಯಿಯ ಮಾಂಸವನ್ನೂ ತಿನ್ನಲಿ ಎಂದು ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.

ಕೋಲ್ಕತ್ತಾದಲ್ಲಿ ಮಾತನಾಡಿದ ಅವರು, ಗೋವು ನಮ್ಮ ತಾಯಿ. ಹಸುವಿನ ಹಾಲು ಸೇವಿಸಿ ನಾವು ಜೀವಂತವಾಗಿದ್ದೇವೆ. ನಮ್ಮ ತಾಯಿಯೊಂದಿಗೆ ಯಾರದರು ಅಸಭ್ಯವಾಗಿ ನಡೆದುಕೊಂಡರೆ ಸುಮ್ಮನೆ ಇರುವುದಿಲ್ಲ. ಅವರಿಗೆ ಯಾವ ರೀತಿ ಪಾಠ ಕಲಿಸಬೇಕೋ ಹಾಗೆ ಕಲಿಸುತ್ತೇವೆ. ಪವಿತ್ರ ಭೂಮಿಯಲ್ಲಿ ಗೋವು ಹತ್ಯೆ ಹಾಗೂ ಗೋ ಮಾಂಸ ತಿನ್ನುವುದು ಅಪರಾಧ ಎಂದು ಹೇಳಿದ್ದಾರೆ.

ಭಾರತೀಯ ತಳಿಯ ಹಸುಗಳು ವಿಶೇಷ ಗುಣವನ್ನು ಹೊಂದಿವೆ. ಅವುಗಳ ಹಾಲಿನಲ್ಲಿ ಚಿನ್ನ ಬೆರೆತಿರುತ್ತದೆ. ಅದಕ್ಕಾಗಿಯೇ ಅವುಗಳ ಹಾಲಿನ ಬಣ್ಣ ಸ್ವಲ್ಪ ಹಳದಿ ಬಣ್ಣ ಇರುತ್ತದೆ. ಹಸುವಿನ ಹೊಕ್ಕುಳವು ಬಿಸಿಲಿನ ಸಹಾಯದಿಂದ ಚಿನ್ನವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಕೆಲವು ಬುದ್ಧಿ ಜೀವಿಗಳು ರಸ್ತೆಬದಿಯ ಅಂಗಡಿಗಳಲ್ಲಿ ಗೋ ಮಾಂಸ ತಿನ್ನುತ್ತಾರೆ. ಅಂತವರಿಗೆ ನಾಯಿ ಮಾಂಸವನ್ನು ಸಹ ತಿನ್ನಲು ನಾನು ಹೇಳುತ್ತೇನೆ. ಅವರು ಯಾವುದೇ ಪ್ರಾಣಿಗಳನ್ನು ತಿಂದರೂ ಅವರ ಆರೋಗ್ಯವು ಉತ್ತಮವಾಗಿರುತ್ತದೆ. ರಸ್ತೆಗಳಲ್ಲಿ ಏಕೆ? ನಿಮ್ಮ ಮನೆಯಲ್ಲಿ ತಿನ್ನಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಿಲೀಪ್ ಘೋಷ್ ಹೇಳಿಕೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ದಿಲೀಪ್ ಘೋಷ್ ಅವರು ಆಗಸ್ಟ್ ನಲ್ಲಿ ಪೂರ್ವ ಮಿಡ್ನಾಪೋರ್ ನ ಮೆಚೆಡಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿ, ವಿವಾದಕ್ಕೆ ಗುರಿಯಾಗಿದ್ದರು.

ಜಿಲ್ಲೆಯ ಬಿಜೆಪಿ ಕಾರ್ಯಕರ್ತರೊಂದಿಗೆ ಕೆಟ್ಟದಾಗಿ ವರ್ತಿಸಿದವರ ಶವವನ್ನು ಯಾರೂ ಗುರುತಿಸಲು ಸಾಧ್ಯವಾಗುವುದಿಲ್ಲ. ಅವರ ಕುಟುಂಬದ ಸದಸ್ಯರು ತಮ್ಮ ಅಂತಿಮ ವಿಧಿಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ದಿಲೀಪ್ ಘೋಷ್ ಅಧಿಕಾರಿಗೆ ಬೆದರಿಕೆ ಹಾಕಿದ್ದರು.

Comments

Leave a Reply

Your email address will not be published. Required fields are marked *