ಪುಂಡಾಟ ಮೆರೆದ ಪಾಕ್‍ಗೆ ಭಾರತೀಯ ಸೇನೆಯಿಂದ ಪ್ರತ್ಯುತ್ತರ

ನವದೆಹಲಿ: ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಯಿಂದಾಗಿ ಪಾಕಿಸ್ತಾನ ಸೇನಾ ಪ್ರದೇಶ ಮತ್ತು ಉಗ್ರರ ನೆಲೆಯ ಮೇಲೆ ಭಾರತೀಯ ಸೇನೆಯು ಶುಕ್ರವಾರ ಕಾರ್ಯಾಚರಣೆ ನಡೆಸಿ ತಕ್ಕ ಉತ್ತ ನೀಡಿದೆ.

ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಎರಡು ಪ್ರದೇಶಗಳಲ್ಲಿ ಶತ್ರು ಕಡೆಯವರು ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ನಡೆಸಿದ್ದರು. ಹೀಗಾಗಿ ಕುಪ್ವಾರಾ ಜಿಲ್ಲೆಯ ಕೇರನ್ ವಲಯದಲ್ಲಿ ಇಂದು ಮಧ್ಯಾಹ್ನ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನೆಯು ಪರಿಣಾಮಕಾರಿಯಾಗಿ ಪ್ರತೀಕಾರ ತೀರಿಸಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಪಾಕ್ ಸೇನೆ ಹಾಗೂ ಉಗ್ರರಿಗೆ ಭಾರೀ ಹಾನಿಯ ವರದಿಗಳಿವೆ ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶದಲ್ಲೂ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಹೋರಾಡಲು ಉಭಯ ದೇಶಗಳು ಗಮನ ಹರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನವು ಭಾರತದೊಂದಿಗಿನ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸುತ್ತಿದೆ. ಕಳೆದ ಒಂದು ವಾರದಿಂದ ಪೂಂಚ್ ಜಿಲ್ಲೆಯಲ್ಲಿ ಶೆಲ್ ದಾಳಿಗಳು ಹಾಗೂ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಲಾಗುತ್ತಿದೆ.

ಸುಂದರ್‌ಬಾನಿ-ನೌಶೇರಾ ವಲಯದಲ್ಲಿ ಕಳೆದ ವಾರ ನಡೆದ ದಾಳಿಯಲ್ಲಿ ಆರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಈ ಕುರಿತು ಮಾರ್ಚ್ ತಿಂಗಳು  ಸಂಸತ್ತಿನಲ್ಲಿ ಮಾಹಿತಿ ನೀಡಿದ್ದ ರಕ್ಷಣಾ ರಾಜ್ಯ ಸಚಿವ ಶ್ರೀಪಾದ್ ನಾಯಕ್, 2020ರ ಜನವರಿ 1ರಿಂದ ಫೆಬ್ರವರಿ 23ರ ನಡುವೆ ಪಾಕಿಸ್ತಾನ ಕನಿಷ್ಠ 646 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ತಿಳಿಸಿದ್ದರು.

2019ರ ನವೆಂಬರ್ 17ರಂದು ಅಖ್ನೂರ್ ಸೆಕ್ಟರ್ ಬಳಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿತ್ತು. ಈ ವೇಳೆ ಅಲ್ಲಿ ಟ್ರಕ್‍ನಲ್ಲಿ ತೆರೆಳುತ್ತಿದ್ದ ಓರ್ವ ಯೋಧ ಹುತಾತ್ಮರಾಗಿ ಇಬ್ಬರು ಯೋಧರು ಗಾಯಗೊಂಡಿದ್ದರು. ಅವರನ್ನು ಉಧಂಪುರ್ ಪ್ರದೇಶದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಗೆಯೇ 2019ರ ನವೆಂಬರ್ 16ರಂದು ಪಾಕಿಸ್ತಾನವು ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಪಾಕಿಸ್ತಾನ ಪಡೆಗಳು ಈ ಪ್ರದೇಶದ ನಾಗರಿಕರನ್ನು ಗುರಿಯಾಗಿಸಿಕೊಂಡು ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಶೆಲ್ ದಾಳಿ ನಡೆಸಿದ್ದವು.

Comments

Leave a Reply

Your email address will not be published. Required fields are marked *