ಪಾಕ್ ಒಳನುಸುಳುವಿಕೆ ವಿಫಲಗೊಳಿಸಿದ ವಿಡಿಯೋ ಬಿಡುಗಡೆ

ನವದೆಹಲಿ: ಜಮ್ಮು-ಕಾಶ್ಮೀರದ ಕೇರನ್ ಸೆಕ್ಟರ್ ನಲ್ಲಿಯ ಫಾರ್ವರ್ಡ್ ಪೋಸ್ಟ್ ಬಳಿ ಪಾಕಿಸ್ತಾನದ ಸೇನೆಯ ಬ್ಯಾಟ್ (Border Action Team) ತಂಡವು ಆಗಸ್ಟ್ ಮೊದಲ ವಾರದಲ್ಲಿ ಒಳನುಸುಳುವಿಕೆಗೆ ಯತ್ನಿಸಿತ್ತು. ಆದರೆ ಅದನ್ನು ಭಾರತೀಯ ಸೇನೆ ಸಮರ್ಥವಾಗಿ ಎದುರಿಸಿತ್ತು. ಈ ಕಾರ್ಯಾಚರಣೆಯ ವಿಡಿಯೋವನ್ನು ಭಾರತೀಯ ಸೇನೆಯು ಇಂದು ಬಿಡುಗಡೆ ಮಾಡಿದೆ.

ಭಾರತೀಯ ಸೇನೆ ಬಿಡುಗಡೆ ಮಾಡಿರುವ 1 ನಿಮಿಷ 52 ಸೆಕೆಂಡ್ ವಿಡಿಯೋದಲ್ಲಿ ಭಾರತದೊಳಗೆ ನುಸುಳಲು ಯತ್ನಿಸಿ ಹತ್ಯೆಯಾದ ಪಾಕಿಸ್ತಾನ ಬ್ಯಾಟ್ ತಂಡದ ಸಿಬ್ಬಂದಿಯ ಮೃತದೇಹಗಳನ್ನು ಕಾಣಬಹುದು. ಗುಡ್ಡಗಾಡು ಪ್ರದೇಶದ ಬಂಡೆಯ ಮೇಲೆ ಹಾಗೂ ಮಧ್ಯೆ ಮೃತದೇಹಗಳು ಬಿದ್ದಿವೆ. ಈ ವಿಡಿಯೋ ಮೂಲಕ ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಸೂಕ್ತ ದಾಖಲೆಯನ್ನು ನೀಡಿ, ಮುಖಭಂಗಕ್ಕೆ ಗುರಿ ಮಾಡಿದೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ನಂತರದ ದಿನವೇ ಪಾಕ್-ಭಾರತದ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗಸ್ಟ್ ಮೊದಲ ವಾರ ಪಾಕಿಸ್ತಾನದ ಸೇನೆಯ ಬ್ಯಾಟ್ ತಂಡವು ದಾಳಿ ನಡೆಸಿತ್ತು. ಇದನ್ನು ವಿಫಲಗೊಳಿಸಿದ ಭಾರತೀಯ ಸೇನೆ ಪ್ರತಿದಾಳಿ ನಡೆಸಿತ್ತು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ 5ರಿಂದ7 ಸೈನಿಕರು ಮತ್ತು ಕೆಲ ಉಗ್ರರು ಸಾವನ್ನಪ್ಪಿದ್ದರು.

ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವ ಉಗ್ರರ ಶವಗಳು ಎಲ್‍ಓಸಿಯಲ್ಲಿ ಬಿದ್ದಿದ್ದವು. ಎಲ್‍ಓಸಿಯಲ್ಲಿ ಶ್ವೇತ ಬಾವುಟ ತೋರಿಸಿ ನಿಮ್ಮ ಶವಗಳನ್ನು ತೆಗೆದುಕೊಂಡು ಹೋಗುವಂತೆ ಪಾಕಿಸ್ತಾನಕ್ಕೆ ಭಾರತ ಸಂದೇಶವೊಂದನ್ನು ರವಾನಿಸಿತ್ತು. ಆದರೆ ಭಾರತದ ಸಂದೇಶಕ್ಕೆ ಪಾಕಿಸ್ತಾನ ಆ ಶವಗಳು ನಮ್ಮದಲ್ಲ ಎಂದು ಪ್ರತಿಕ್ರಿಯೆ ನೀಡಿತ್ತು.

ದಾಳಿಯಲ್ಲಿ ಸಾವನ್ನಪ್ಪಿರುವ ಸೈನಿಕರು ಮತ್ತು ಉಗ್ರರ ಮೃತದೇಹಗಳು ಎಲ್‍ಓಸಿಯಲ್ಲಿವೆ. ಶ್ವೇತ ಬಾವುಟ ತೋರಿಸಿ ನಿಮ್ಮ ಶವಗಳನ್ನು ತೆಗೆದುಕೊಂಡು ಹೋಗಿ ಅಂತಿಮ ಕ್ರಿಯೆಗಳನ್ನು ನಡೆಸಬಹುದು ಎಂದು ಭಾರತೀಯ ಸೇನೆ ಹೇಳಿತ್ತು. ಗಡಿ ಪ್ರದೇಶದಲ್ಲಿ ಶವಗಳಿರುವ ಸ್ಯಾಟ್‍ಲೈಟ್ ಫೋಟೋಗಳು ಬಿಡುಗಡೆ ಮಾಡಲಾಗಿತ್ತು. ಕಾಶ್ಮೀರದಲ್ಲಿ ಶಾಂತಿ ಕದಡಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಜೈಶ್ ಸಂಘಟನೆಯ ಉಗ್ರರನ್ನು ಭಾರತದೊಳಗೆ ನುಸುಳಿಸುವ ಮೂಲಕ ಭಯೋತ್ಪಾದಕ ಚಟುವಟಿಕೆಗೆ ಪ್ರೋತ್ಸಾಹಿಸುತ್ತಿದೆ ಎಂದು ವರದಿಯಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ್ದ ರಕ್ಷಣಾ ವಕ್ತಾರ ರಾಜೇಶ್ ಕಾಲಿಯಾ, ಕುಪ್ವಾರ ಜಿಲ್ಲೆಯ ಕೇರನ್ ಸೆಕ್ಟರ್ ಬಳಿಯ ಫಾರ್ವರ್ಡ್ ಪೋಸ್ಟ್ ಮೇಲೆ ಬ್ಯಾಟ್ ತಂಡ ನಡೆಸಿದ ದಾಳಿಯನ್ನು ಭಾರತೀಯ ಸೈನಿಕರು ವಿಫಲಗೊಳಿಸಿದೆ. ಸಾವನ್ನಪ್ಪಿರುವವರ ಪೈಕಿ ನಾಲ್ವರು ಪಾಕಿಸ್ತಾನ ಸೇನೆಯ ಸ್ಪೆಷಲ್ ಸರ್ವಿಸ್ ಗ್ರೂಪ್ ಕಮಾಂಡೋಗಳಿರುವ ಶಂಕೆಗಳು ವ್ಯಕ್ತವಾಗಿವೆ. ಭಾರತದ ಶಿಬಿರಗಳತ್ತ ಸಮೀಪಿಸುತ್ತಿದ್ದಂತೆ ಪಾಕಿಸ್ತಾನ ಗುಂಡಿನ ದಾಳಿಯನ್ನು ತೀವ್ರಗೊಳಿಸಿತ್ತು. ದಾಳಿಯ ಪ್ರತಿಯಾಗಿ ಭಾರತ ಸಹ ಪ್ರತಿದಾಳಿ ನಡೆಸಿತ್ತು. ಆದರೆ ದಾಳಿಯಲ್ಲಿ ಬಲಿಯಾಗಿರುವ ಉಗ್ರರ ಶವಗಳನ್ನು ವಶಕ್ಕೆ ಪಡೆದುಕೊಂಡಿಲ್ಲ. ಗಡಿ ಭಾಗದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಪಾಕಿಸ್ತಾನ ಎಲ್‍ಓಸಿಯಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಸೈನಿಕರನ್ನು ನೇಮಕಗೊಳಿಸಿದೆ ಎಂದು ತಿಳಿಸಿದ್ದರು.

Comments

Leave a Reply

Your email address will not be published. Required fields are marked *