ಪಾಕ್‌ ಕದನ ವಿರಾಮ ಉಲ್ಲಂಘಿಸಿದ್ರೆ ಪ್ರತಿದಾಳಿ ನಡೆಸಿ – ಕಮಾಂಡರ್‌ಗಳಿಗೆ ಭಾರತೀಯ ಸೇನೆ ಪೂರ್ಣ ಅಧಿಕಾರ

ನವದೆಹಲಿ: ಪಾಕಿಸ್ತಾನ ಕದನ ವಿರಾಮ (Ceasefire) ಉಲ್ಲಂಘಿಸಿದರೆ ಪ್ರತಿದಾಳಿ ನಡೆಸಿ ಎಂದು ಸೇನಾ ಕಮಾಂಡರ್‌ಗಳಿಗೆ ಭಾರತೀಯ ಸೇನೆ (Indian Army) ಪೂರ್ಣ ಅಧಿಕಾರ ನೀಡಿದೆ.

ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳ ನಡುವೆ ಶನಿವಾರ ನಡೆದ ಒಪ್ಪಂದವನ್ನು ಉಲ್ಲಂಘಿಸಿದರೆ ಪ್ರತಿದಾಳಿ ನಡೆಸಲು ಪಶ್ಚಿಮ ಗಡಿಯಲ್ಲಿರುವ ಎಲ್ಲಾ ಸೇನಾ ಕಮಾಂಡರ್‌ಗಳಿಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅಧಿಕಾರ ನೀಡಿ ಆದೇಶಿಸಿದ್ದಾರೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ- ಹುತಾತ್ಮ ವೀರ ಯೋಧನಿಗೆ ಭಾವುಕ ವಿದಾಯ; ಕಣ್ಣೀರಿಟ್ಟ ಕುಟುಂಬಸ್ಥರು

ನಿನ್ನೆ ಸಂಜೆ ಎರಡೂ ಕಡೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಮಾತನಾಡಿದ ನಂತರ ಗಡಿಯಲ್ಲಿ ಯಾವುದೇ ದಾಳಿಗಳು ನಡೆದಿಲ್ಲ ಎನ್ನಲಾಗಿದೆ.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ನಂಟು ಹೊಂದಿದ್ದ ಭಯೋತ್ಪಾದಕರು 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ದಾಳಿ ಮಾಡಿತು.

ನಾಗರಿಕ ಸರ್ಕಾರದ ಮೇಲೆ ಸೇನೆಯು ಬಲವಾದ ಹಿಡಿತವನ್ನು ಹೊಂದಿರುವ ನೆರೆಯ ರಾಷ್ಟ್ರವು ಭಾರತದ ನಾಗರಿಕ ಪ್ರದೇಶಗಳ ಮೇಲೆ ಡ್ರೋನ್‌ಗಳ ಮೂಲಕ ದಾಳಿ ಮಾಡುವ ಮೂಲಕ ಪರಿಸ್ಥಿತಿಯನ್ನು ಉಲ್ಬಣಗೊಳಿಸಿತ್ತು. ಇದನ್ನೂ ಓದಿ: ಅಣ್ವಸ್ತ್ರಗಳಿರೋ ಬೆಟ್ಟದ ಮೇಲೆ ದಾಳಿ – ಬೆದರಿದ ಪಾಕ್‌, ಅಮೆರಿಕಕ್ಕೂ ಶಾಕ್‌!

ಭಾರತವು ಪ್ರತಿಯಾಗಿ ಪಾಕಿಸ್ತಾನದ ಪ್ರದೇಶದೊಳಗೆ ಆಯ್ದ ಮಿಲಿಟರಿ ಗುರಿಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿತು. ಇವುಗಳಲ್ಲಿ ರಫಿಕಿ, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಸಿಯಾಲ್‌ಕೋಟ್‌ನಲ್ಲಿರುವ ರೆಡಾರ್‌ ಸ್ಥಾಪನೆಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಮತ್ತು ಮದ್ದುಗುಂಡು ಡಿಪೋಗಳು ಸೇರಿವೆ.