ಒಂದೇ ವಾರದಲ್ಲಿ ನಾಲ್ವರು ಸಂಬಂಧಿಕರನ್ನ ಕೊಲೆಗೈದ ಟೆಕ್ಕಿ

– ಕಾರಿನಲ್ಲಿ ಶವ ಇಟ್ಟುಕೊಂಡು ಪೊಲೀಸ್ ಠಾಣೆಗೆ ಬಂದ ಆರೋಪಿ

ವಾಷಿಂಗ್ಟನ್: ಒಂದೇ ವಾರದಲ್ಲಿ ನಾಲ್ವರು ಸಂಬಂಧಿಕರನ್ನು ಕೊಲೆಗೈದ ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಂಕರ್ ನಾಗಪ್ಪ ಹುನಗೋಡ (53) ಬಂಧಿತ ಐಟಿ ಉದ್ಯೋಗಿ. ಶಂಕರ್ ಕ್ಯಾಲಿಫೋರ್ನಿಯಾದ ಪ್ಲೇಸರ್ ಕೌಂಟಿಯ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದ. ಆರೋಪಿಯು ಸೋಮವಾರ ಕೊಲೆಗೈದ ವ್ಯಕ್ತಿಯ ಮೃತದೇಹವನ್ನು ಕಾರಿನಲ್ಲಿ ಇಟ್ಟುಕೊಂಡು 350 ಕಿ.ಮೀ. ದೂರದ ಮೌಂಟ್ ಶಸ್ತ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಇದನ್ನೂ ಓದಿ: ಹೆಣ್ಣು ಮಕ್ಕಳ ಮೇಲಿನ ದ್ವೇಷಕ್ಕೆ ಕುಟುಂಬವೇ ಬಲಿ – ತಪ್ಪೊಪ್ಪಿಕೊಂಡ ಕೇರಳ ಸೈನೈಡ್ ಕಿಲ್ಲರ್

ನಾನು ಒಟ್ಟು ನಾಲ್ವರನ್ನು ಕೊಲೆ ಮಾಡಿದ್ದೇನೆ. ಈ ಪೈಕಿ ಓರ್ವನ ಶವವನ್ನು ಪೊಲೀಸ್ ಠಾಣೆಗೆ ತಂದಿದ್ದೇನೆ. ಮಿಕ್ಕ ಮೂವರ ಮೃತದೇಹಗಳು ಪ್ಲೇಸರ್ ಕೌಂಟಿಯ ಅಪಾರ್ಟ್‍ಮೆಂಟ್‍ನಲ್ಲಿವೆ ಎಂದು ಶಂಕರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ಆರೋಪಿಯ ಹೇಳಿಕೆ ಆಧಾರದ ಮೇಲೆ ಪೊಲೀಸರು ಪ್ಲೇಸರ್ ಕೌಂಟಿಯ ಅಪಾರ್ಟ್‍ಮೆಂಟ್‍ಗೆ ಭೇಟಿ ನೀಡಿ ಪರಿಶೀಲನೆ ನಡೆದಿದ್ದರು. ಈ ವೇಳೆ ಇಬ್ಬರು ವಯಸ್ಕರ ಹಾಗೂ ಮಗುವಿನ ಮೃತ ದೇಹ ಪತ್ತೆಯಾಗಿವೆ. ಆರೋಪಿ ಶಂಕರ್ ಅಕ್ಟೋಬರ್ 7ರಂದು ಇಬ್ಬರನ್ನು ಕೊಲೆ ಮಾಡಿದ್ದ. ಮರುದಿನ ಅಂದ್ರೆ ಅಕ್ಟೋಬರ್ 9ರಂದು ಅದೇ ಅಪಾರ್ಟ್‍ಮೆಂಟ್‍ನಲ್ಲಿ ಮತ್ತೊಬ್ಬನನ್ನು ಹತ್ಯೆ ಮಾಡಿದ್ದ. ಕೊನೆಯದಾಗಿ ಅಕ್ಟೋಬರ್ 13ರಂದು ಓರ್ವನನ್ನು ಕೊಲೆ ಮಾಡಿದ್ದ. ಬಳಿಕ ಶವವನ್ನು ಕಾರಿನಲ್ಲಿ ಇಟ್ಟುಕೊಂಡು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಮೌಂಟ್ ಶಸ್ತ ಠಾಣೆ ಪೊಲೀಸರು ಶಂಕರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಶಂಕರ್ ಯಾಕೆ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಭಾರತದಲ್ಲಿರುವ ಮೃತರ ಸಂಬಂಧಿಕರಿಗೆ ಪೊಲೀಸರು ಮಾಹಿತಿ ನೀಡಿದ್ದು, ಶವಗಳನ್ನು ಭಾರತಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *