ವಾಯುಸೇನೆಗೆ ಚಿನೂಕ್ ಹೆಲಿಕಾಪ್ಟರ್ ಸೇರ್ಪಡೆ – ವಿಶೇಷತೆ ಏನು ? ವಿಡಿಯೋ ನೋಡಿ

ಚಂಡೀಗಢ: ಭಾರತೀಯ ವಾಯು ಸೇನೆಗೆ ಅಮೆರಿಕದ ಚಿನೂಕ್ ಹೆಲಿಕಾಪ್ಟರ್ ಗಳು ಸೇರ್ಪಡೆಯಾಗಿದೆ. ಚಂಡೀಗಢದ ವಾಯುನೆಲೆಯಲ್ಲಿ 4 ಹೆಲಿಕಾಪ್ಟರ್ ಗಳನ್ನು ವಾಯು ಸೇನೆಯ ಮುಖ್ಯಸ್ಥ ಧನೋವಾ ಅವರು ಸೇರ್ಪಡೆಗೊಳಿಸಿದ್ದಾರೆ.

2015ರಲ್ಲಿ ಭಾರತ ಸರ್ಕಾರ ಅಮೆರಿಕ ಮೂಲದ ಬೋಯಿಂಗ್ ಕಂಪನಿಯ ಜೊತೆ 15 ಚಿನೂಕ್ ಹೆಲಿಕಾಪ್ಟರ್ ಖರೀದಿ ಸಂಬಂಧ 10 ಸಾವಿರ ಕೋಟಿ ರೂ. ವೆಚ್ಚದ ಒಪ್ಪಂದ ಮಾಡಿಕೊಂಡಿತ್ತು. 15ರ ಪೈಕಿ 4 ಹೆಲಿಕಾಪ್ಟರ್ ಗಳು ಈಗ ಭಾರತಕ್ಕೆ ಬಂದಿವೆ.

ವಿಶೇಷತೆ ಏನು?
ಬಹುಉಪಯೋಗಿ ಹೆಲಿಕಾಪ್ಟರ್ ಚಿನೂಕ್ ಎಲ್ಲ ಬಗೆಯ ಸೇನಾ ಕಾರ್ಯಾಚರಣೆಗೆ ನೆರವಾಗಲಿದ್ದು, ಪ್ರಮುಖವಾಗಿ ಪ್ರವಾಹ, ಅಗ್ನಿ ಅವಘಡ, ಸೇನಾ ವಸ್ತುಗಳ ಪೂರೈಕೆಯಂತಹ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಸೇನಾ ಕ್ಯಾಂಪ್ ಗಳಿಗೆ ಸೈನಿಕರ ರವಾನೆ, ಫಿರಂಗಿಗಳ ರವಾನೆ, ಇತರೆ ಶಸ್ತ್ರಾಸ್ತ್ರಗಳ ಪೂರೈಕೆ, ಇಂಧನವನ್ನು ಸಾಗಿಸಬಲ್ಲದು. ಒಟ್ಟು 9.6 ಟನ್ ತೂಕದ ವಸ್ತುಗಳನ್ನು ಎತ್ತಿಕೊಂಡು ಹೋಗುವ ಸಾಮಥ್ರ್ಯ ಈ ಹೆಲಿಕಾಪ್ಟರ್ ಗೆ ಇದೆ. ಬೋಯಿಂಗ್ ಕಂಪನಿ ಇದೂವರೆಗೆ ಒಟ್ಟು 1,179 ಹೆಲಿಕಾಪ್ಟರ್ ಗಳನ್ನು ಉತ್ಪಾದಿಸಿದೆ.

ಮೂವರು ಸಿಬ್ಬಂದಿ(ಇಬ್ಬರು ಪೈಲಟ್ ಮತ್ತು ಫ್ಲೈಟ್ ಎಂಜಿನಿಯರ್) ಈ ಹೆಲಿಕಾಪ್ಟರ್ ಅನ್ನು ನಿಯಂತ್ರಿಸಬಹುದು. ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳ ಬಳಕೆಯಲ್ಲಿ ಚಿನೂಕ್ ಹೆಲಿಕಾಪ್ಟರ್ ಇದ್ದು ತನ್ನ ಸಾಮಥ್ರ್ಯವನ್ನು ತೋರಿಸಿದೆ. ಹೊಸದಾಗಿ ಬಂದಿರುವ ಚಿನೂಕ್ ಹೆಲಿಕಾಪ್ಟರ್ ಗಳು ರಷ್ಯಾ ನಿರ್ಮಿತ ಮಿ-1, ಮಿ-26, ಮಿ-35 ಹೆಲಿಕಾಪ್ಟರ್ ಗಳ ಜಾಗವನ್ನು ತುಂಬಲಿದೆ.

ದಾಳಿ ನಡೆಸಬಲ್ಲ 22 ಅಪಾಚಿ ಹೆಲಿಕಾಪ್ಟರ್ ಖರೀದಿ ಸಂಬಂಧ ಭಾರತ ಬೋಯಿಂಗ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಈ ಹೆಲಿಕಾಪ್ಟರ್ ಗಳು ಪಂಜಾಬಿನಲ್ಲಿರುವ ಪಠಾಣ್‍ಕೋಟ್ ವಾಯುನೆಲೆಗೆ ಬರಲಿವೆ.

Comments

Leave a Reply

Your email address will not be published. Required fields are marked *