ಸೇವೆ ಸಲ್ಲಿಸಿದ್ದಕ್ಕೂ ಸಾರ್ಥಕ, ನರ್ಸಿಂಗ್ ವೃತ್ತಿಗೆ ಬಂದಿದ್ದಕ್ಕೆ ಹೆಮ್ಮೆ – ಹೂಮಳೆಗೆ ಸಿಬ್ಬಂದಿ ಸಂತಸ

ಬೆಂಗಳೂರು: ದೇಶಕ್ಕಾಗಿ ಕೊರೊನಾ ತೊಲಗಿಸಲು ನಾವು ಸೇವೆ ಮಾಡಿದ್ದಕ್ಕೂ ಸಾರ್ಥಕವಾಯಿತು. ನಮ್ಮ ಸೇವೆಯನ್ನು ಗುರುತಿಸಿ ಇಂದು ಭಾರತೀಯ ವಾಯು ಸೇನೆ ಗೌರವ ಸರ್ಮಪಿಸಿದೆ. ನಿಜಕ್ಕೂ ಇದು ಹೆಮ್ಮೆಯ ವಿಚಾರವಾಗಿದೆ ಎಂದು ವಿಕ್ಟೋರಿಯ ಆಸ್ಪತ್ರೆಯ ನರ್ಸ್ ಮತ್ತು ವೈದ್ಯರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ನರ್ಸ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫಿಸರ್ ಆಗಿ ಕೆಲಸ ಮಾಡಿದ್ದು, ಈ ವೃತ್ತಿಗೆ ಬಂದಿದ್ದಕ್ಕೂ ಹೆಮ್ಮೆಯಾಗುತ್ತದೆ. ನರ್ಸಿಂಗ್ ತುಂಬಾ ಜವಾಬ್ದಾರಿಯುತ ಕೆಲಸವಾಗಿದೆ. ಇಡೀ ದೇಶವೇ ಕೊರೊನಾ ಸಮಸ್ಯೆ ಬಗೆಹರಿಸಲು ಕಷ್ಟಪಡುತ್ತಿದೆ. ಈ ವೇಳೆ ನಾವು ಕೊರೊನಾ ವಿರುದ್ಧ ಹೋರಾಡಲು ಸೇವೆ ಸಲ್ಲಿಸುತ್ತಿದ್ದೀವಿ ಅನ್ನೋದು ತುಂಬಾ ಸಂತಸವಾಗುತ್ತಿದೆ ಎಂದರು.

ಇಂದು ಕಮಾಂಡರ್ ಕೂಡ ಈ ರೀತಿ ನಮಗೆ ಗೌರವ ಸಲ್ಲಿಸಿದ್ದಾರೆ. ನಿಜಕ್ಕೂ ಇದು ತುಂಬಾ ಖುಷಿಯಾದ ವಿಚಾರ. ಸಾಮಾನ್ಯ ದಿನ ಕೆಲಸ ಮಾಡುವುದು ಬೇರೆ, ಆದರೆ ಕೊರೊನಾ ರೋಗಿಗಳನ್ನು ನೋಡಿಕೊಳ್ಳುವ ಮೂಲಕ ಇನ್ನೂ ನಮ್ಮ ಜವಾಬ್ದಾರಿಯನ್ನ ಹೆಚ್ಚಿಸಿದೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಪೊಲೀಸರು, ವೈದ್ಯರು ಮತ್ತು ಮಾಧ್ಯಮದವರಿಗೆ ನರ್ಸ್ ಧನ್ಯವಾದ ತಿಳಿಸಿದರು.

ಇತರೆ ನರ್ಸ್, ವೈದ್ಯರು ಮಾತನಾಡಿ, ಭಾರತೀಯ ವಾಯು ಸೇನೆ ನಮ್ಮ ಸೇವೆಯನ್ನು ಗುರುತಿಸಿ ಇಂದು ಗೌರವ ಸಲ್ಲಿಸಿದೆ. ಈ ಮೂಲಕ ನಾವು ಇಂತಹ ಕಷ್ಟದ ಸಂದರ್ಭದಲ್ಲಿ ಕೆಲಸ ಮಾಡಿದ್ದಕ್ಕೂ ಸಾರ್ಥಕ ಅನ್ನಿಸುತ್ತಿದೆ ಎಂದರು.

ನಾನು ಒಂದೂವರೆ ತಿಂಗಳಿಂದ ಕೊರೊನಾ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇಂದು ಭಾರತೀಯ ಸೇನೆ ಗೌರವ ಸಲ್ಲಿಸಿದ್ದರಿಂದ ನಮಗೆ ಸ್ಫೂರ್ತಿ ಸಿಕ್ಕಿದಂತಾಗಿದೆ. ಇನ್ನೂ ಹೆಚ್ಚಾಗಿ ಕೆಲಸ ಮಾಡಲು ಉತ್ತೇಜನ ಸಿಕ್ಕಿದಂತಾಗಿದೆ ಎಂದು ಸಂತಸಪಟ್ಟರು.

ನಾವು ನಮ್ಮ ಮಕ್ಕಳು, ಪತಿ ಎಲ್ಲರನ್ನೂ ಬಿಟ್ಟು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಒಂದು ರೀತಿ ನಾವು ಕೊರೊನಾ ಕ್ವಾರಂಟೈನ್‍ನಲ್ಲಿದ್ದೇವೆ. ನನ್ನ ಸೇವೆಯನ್ನು ಗುರುತಿಸಿ ಭಾರತೀಯ ವಾಯು ಸೇನೆ ಗೌರವ ಸಲ್ಲಿಸಿದ್ದು, ತುಂಬಾ ಹೆಮ್ಮೆಯಾಗುತ್ತಿದೆ ಎಂದು ನರ್ಸ್ ಮತ್ತು ವೈದ್ಯರು ಹರ್ಷ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *