ಸಿಕ್ಸ್‌ ಸಿಡಿಸಿ ಅಫ್ರಿದಿಯನ್ನು ಹಿಂದಿಕ್ಕಿದ ಹಿಟ್‌ಮ್ಯಾನ್‌ – ಭಾರತಕ್ಕೆ ಸರಣಿ ಜಯ

ಫ್ಲೋರಿಡಾ: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ವಿಂಡಿಸ್‌ ವಿರುದ್ಧ 59 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ 20 ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 191 ರನ್‌ಗಳಿಸಿತು. 192 ರನ್‌ಗಳ ಗುರಿಯನ್ನು ಪಡೆದ ವಿಂಡೀಸ್‌ 19.1 ಓವರ್‌ಗಳಲ್ಲಿ 132 ರನ್‌ಗಳಿಗೆ ಆಲೌಟ್‌ ಆಯ್ತು.

ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳಲು ಆರಂಭಿಸಿದ ವಿಂಡೀಸ್‌ ಪರ ನಾಯಕ ನಿಕೋಲಸ್‌ ಪೂರನ್‌ 24 ರನ್‌(8 ಎಸೆತ, 1 ಬೌಂಡರಿ, 3 ಸಿಕ್ಸರ್‌), ರೋವ್‌ಮನ್‌ ಪಾವೆಲ್‌ 24 ರನ್‌(16 ಎಸೆತ,1 ಬೌಂಡರಿ, 2 ಸಿಕ್ಸರ್‌) ಹೊಡೆದರು.

ಆರ್ಶದೀಪ್‌ ಸಿಂಗ್‌ 3 ವಿಕೆಟ್‌ ಪಡೆದರೆ , ಆವೇಶ್‌ ಖಾನ್‌, ಅಕ್ಷರ್‌ ಪಟೇಲ್‌, ರವಿ ಬಿಷ್ಣೋಯಿ ತಲಾ 2 ವಿಕೆಟ್‌ ಪಡೆದರು. ಇದನ್ನೂ ಓದಿ: CWG 2022: ಚಿನ್ನಕ್ಕೆ ಮುತ್ತಿಟ್ಟ ರವಿ ಕುಮಾರ್ ದಹಿಯಾ, ವಿನೇಶ್ ಫೋಗಟ್ – ಪೂಜಾ ಗೆಹ್ಲೋಟ್‍ಗೆ ಕಂಚು

ಸ್ಪರ್ಧಾತ್ಮಕ ಮೊತ್ತ:
ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ ಮತ್ತು ಸೂರ್ಯಕುಮಾರ್‌ ಯಾದವ್‌ ಆರಂಭದಿಂದಲೇ ವಿಂಡೀಸ್‌ ಬೌಲರ್‌ಗಳಿಗೆ ಬಿಸಿ ಮುಟ್ಟಿಸಲು ಆರಂಭಿಸಿದ್ದರು. 4.4 ಓವರ್‌ಗಳಲ್ಲೇ ಮೊದಲ ವಿಕೆಟ್‌ಗೆ 53 ರನ್‌ ಬಂದಿತ್ತು.

ರೋಹಿತ್‌ ಶರ್ಮಾ 33 ರನ್‌(16 ಎಸೆತ, 2 ಬೌಂಡರಿ, 3 ಸಿಕ್ಸರ್‌), ಸೂರ್ಯಕುಮಾರ್‌ ಯಾದವ್‌ 24 ರನ್(14‌ ಎಸೆತ, 1 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು. ರಿಷಬ್‌ ಪಂತ್‌ 44 ರನ್‌( 31 ಎಸೆತ, 6 ಬೌಂಡರಿ), ಸಂಜು ಸ್ಯಾಮ್ಸನ್‌ ಔಟಾಗದೇ 30 ರನ್‌( 23 ಎಸೆತ, 2 ಬೌಂಡರಿ, 1 ಸಿಕ್ಸರ್‌), ಕೊನೆಯಲ್ಲಿ ಅಕ್ಷರ್‌ ಪಟೇಲ್‌‌ ಔಟಾಗದೇ 20 ರನ್‌(8 ಎಸೆತ, 1 ಬೌಂಡರಿ, 2 ಸಿಕ್ಸರ್) ಸಿಡಿಸಿದ ಪರಿಣಾಮ ಭಾರತ 190 ರನ್‌ಗಳ ಗಡಿಯನ್ನು ದಾಟಿತ್ತು.

4 ಓವರ್‌ ಎಸೆದು 17 ರನ್‌ ನೀಡಿ 2 ವಿಕೆಟ್‌ ಕಿತ್ತ ಆವೇಶ್‌ ಖಾನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಅಫ್ರಿದಿ ರೆಕಾರ್ಡ್‌ ಬ್ರೇಕ್‌: ಈ ಪಂದ್ಯದಲ್ಲಿ 3 ಸಿಕ್ಸ್‌ ಸಿಡಿಸುವ ಮೂಲಕ ಹಿಟ್‌ ಮ್ಯಾನ್‌ ರೋಹಿತ್‌ ಶರ್ಮಾ ಪಾಕಿಸ್ತಾನದ ಆಲ್‌ರೌಂಡರ್‌ ಅಫ್ರಿದಿ ಅವರನ್ನು ಹಿಂದಿಕ್ಕಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸ್‌ ಸಿಡಿಸಿದ ಎರಡನೇ ಬ್ಯಾಟರ್‌ ಆಗಿ ಹೊರ ಹೊಮ್ಮಿದ್ದಾರೆ.

ರೋಹಿತ್‌ ಶರ್ಮಾ 477 ಸಿಕ್ಸ್‌ ಸಿಡಿಸಿದರೆ ಅಫ್ರಿದಿ 476 ಸಿಕ್ಸ್‌ ಸಿಡಿಸಿದ್ದರು. ಮೊದಲ ಸ್ಥಾನದಲ್ಲಿ ವಿಂಡೀಸ್‌ನ ಗೇಲ್‌ ಇದ್ದು 533 ಸಿಕ್ಸ್‌ ಸಿಡಿಸಿದ್ದಾರೆ. ರೋಹಿತ್‌ ಶರ್ಮಾ ಟೆಸ್ಟ್‌ನಲ್ಲಿ 64, ಏಕದಿನದಲ್ಲಿ 250, ಟಿ20ಯಲ್ಲಿ 163 ಸಿಕ್ಸ್‌ ಸಿಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *