ಇಂದೋರ್: ಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರ ಬ್ಯಾಟಿಂಗ್ ನಿಂದಾಗಿ ಭಾರತ 88 ರನ್ ಗಳಿಂದ ಗೆಲ್ಲುವ ಮೂಲಕ ಇನ್ನು ಒಂದು ಪಂದ್ಯ ಇರುವಂತೆಯೆ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ರೋಹಿತ್ ಶರ್ಮಾ ಶತಕ, ಕೆಎಲ್ ರಾಹುಲ್ ಅರ್ಧಶತಕದಿಂದಾಗಿ 5 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿತು. ಭಾರೀ ಮೊತ್ತವನ್ನು ಬೆನ್ನಟ್ಟಿದ ಲಂಕಾ 17.2 ಓವರ್ ಗಳಲ್ಲಿ 172 ರನ್ ಗಳಿಸಿ ಸರ್ವಪತನ ಕಂಡಿತು.
ಶ್ರೀಲಂಕಾ ಪರ ಕುಸಲ್ ಪಿರೇರಾ 77 ರನ್(37 ಎಸೆತ, 4 ಬೌಂಡರಿ, 7 ಸಿಕ್ಸರ್) ಸಿಡಿಸಿ ಔಟಾದರೆ ಉಪುಲ್ ತರಂಗ 47 ರನ್(29 ಎಸೆತ, 3 ಬೌಂಡರಿ, 2 ಸಿಕ್ಸರ್) ಸಿಡಿಸಿ ಸ್ವಲ್ಪ ಪ್ರತಿರೋಧ ತೋರಿದರು.
ಭಾರತದ ಪರ ಚಹಲ್ 4 ಓವರ್ ಎಸೆದು 52 ರನ್ ನೀಡಿ 4 ವಿಕೆಟ್ ಉರುಳಿಸಿದರೆ, ಕುಲದೀಪ್ ಯಾದವ್ 4 ಓವರ್ ಎಸೆದು 52 ರನ್ ನೀಡಿ 3 ವಿಕೆಟ್ ಪಡೆದರು. ಪಾಂಡ್ಯ ಮತ್ತು ಜಯದೇವ್ ಉನದ್ಕತ್ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: ರೋಹಿತ್ ಶರ್ಮಾ ಬ್ಯಾಟಿಂಗ್ ವೈಭವ ಹೀಗಿತ್ತು

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಭಾರತದ ಪರ ರೋಹಿತ್ ಶರ್ಮಾ 118 ರನ್(43 ಎಸೆತ, 12 ಬೌಂಡರಿ, 10 ಸಿಕ್ಸರ್) ಗಳಿಸಿ ಔಟಾದರು. ಕೆಎಲ್ ರಾಹುಲ್ 89 ರನ್(49 ಎಸೆತ, 5 ಬೌಂಡರಿ, 8 ಸಿಕ್ಸರ್) ಸಿಡಿಸಿ ಔಟಾದರೆ ಧೋನಿ 28 ರನ್(21 ಎಸೆತ, 2 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಹಾರ್ದಿಕ್ ಪಾಂಡ್ಯ 10 ರನ್(3 ಎಸೆತ, 1 ಬೌಂಡರಿ, 1 ಸಿಕ್ಸ್) ಹೊಡೆದು ಕ್ಯಾಚ್ ನೀಡಿದರು. ಇವರೆಲ್ಲರ ಭರ್ಜರಿ ಆಟದಿಂದಾಗಿ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿತ್ತು.
ಸ್ಫೋಟಕ ಶತಕ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲ ಟಿ20ಯನ್ನು 93 ರನ್ ಗಳಿಂದ ಭಾರತ ಗೆದ್ದುಕೊಂಡಿತ್ತು. ಲಂಕಾ ಪ್ರವಾಸದ ಕೊನೆಯ ಟಿ20 ಪಂದ್ಯ ಡಿಸೆಂಬರ್ 24 ಭಾನುವಾರ ಮುಂಬೈಯಲ್ಲಿ ನಡೆಯಲಿದೆ.






























Leave a Reply