ಸೂಪರ್‌ಮ್ಯಾನ್‌ನಂತೆ ಬದಲಾದ ಹಿಟ್‍ಮ್ಯಾನ್- ರೋಹಿತ್ ಬ್ರಿಲಿಯಂಟ್ ಕ್ಯಾಚ್‍ಗೆ ಅಭಿಮಾನಿಗಳು ಫಿದಾ

ಆಕ್ಲೆಂಡ್: ಟೀಂ ಇಂಡಿಯಾ ತಂಡದಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಿಟ್‍ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದಾರೆ. ತಾವು ಅತ್ಯುತ್ತಮ ಬ್ಯಾಟ್ಸ್ ಮನ್ ಮಾತ್ರವಲ್ಲ, ಉತ್ತಮ ಫೀಲ್ಡರ್ ಎಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸಾಬೀತು ಪಡಿಸಿದ್ದಾರೆ.

ಕಿವೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಅದ್ಭುತ ಕ್ಯಾಚ್ ಪಡೆದು ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ. ಶಿವಂ ದುಬೆ ಬೌಲ್ ಮಾಡಿದ ಇನ್ನಿಂಗ್ಸ್ 8ನೇ ಓವರಿನ 5 ಎಸೆತದಲ್ಲಿ ಘಟನೆ ನಡೆದಿದ್ದು, ಮಾರ್ಟಿನ್ ಗಪ್ಟಿಲ್ ಸಿಡಿಸಿದ ಭರ್ಜರಿ ಶಾಟ್‍ಗೆ ಚೆಂಡು ಬೌಂಡರಿ ಗೆರೆ ದಾಡುವ ಸನಿಹದಲ್ಲಿತ್ತು. ಈ ಹಂತದಲ್ಲಿ ಬೌಂಡರಿ ಗೆರೆ ಬಳಿ ಇದ್ದ ರೋಹಿತ್ ಶರ್ಮಾ ಜಂಪ್ ಮಾಡಿ ಕ್ಯಾಚ್ ಪಡೆದಿದ್ದರು.

ರೋಹಿತ್ ಶರ್ಮಾರ ಈ ಪ್ರಯತ್ನಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಬೌಂಡರಿ ಗೆರೆಗೆ ತಾಗದಂತೆ ರೋಹಿತ್ ಕ್ಯಾಚ್ ಪೂರ್ಣಗೊಳಿಸಿದ್ದು ಹೈಲೈಟ್ ಅಂಶವಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ಮನ್ರೊ 59 ರನ್, ಕೇನ್ ವಿಲಿಯಮ್ಸ್‌ನ್ 51 ರನ್, ರಾಸ್ ಟೇಲರ್ ಅವರ ಅಜೇಯ 54 ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿತು.

204 ರನ್‍ಗಳ ಬೃಹತ್ ರನ್ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಕೆ.ಎಲ್.ರಾಹುಲ್ 56 ರನ್ ಹಾಗೂ ಶ್ರೇಯಸ್ ಅಯ್ಯರ್ ಔಟಾಗದೆ 58 ರನ್ ಗಳ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ 6 ಎಸೆತ ಬಾಕಿ ಇರುವಂತೆಯೇ ಗುರಿ ಮುಟ್ಟಿತು. ಇದರೊಂದಿಗೆ ಟೀಂ ಇಂಡಿಯಾ ಟಿ20 ಮಾದರಿಯಲ್ಲಿ ವಿದೇಶಿ ನೆಲದಲ್ಲಿ ಅತ್ಯಧಿಕ ಸ್ಕೋರ್ ಚೇಸ್ ಮಾಡಿ ಗೆದ್ದ ಸಾಧನೆಯನ್ನು ಮಾಡಿದೆ. 2018ರ ಜುಲೈ 8 ರಂದು ಇಂಗ್ಲೆಂಡ್ ವಿರುದ್ಧ ಬ್ರಿಸ್ಟಲ್‍ನಲ್ಲಿ 198 ರನ್ ಬೆನ್ನತ್ತಿ ಗೆಲುವು ಪಡೆದಿತ್ತು.

ಟೀ ಇಂಡಿಯಾ ಪರ ವಿರಾಟ್ ಕೊಹ್ಲಿ 45 ರನ್, ಮನೀಶ್ ಪಾಂಡೆ ಔಟಾಗದೇ 14 ರನ್ ಗಳಿಸಿ ಗೆಲುವಿಗೆ ಕಾಣಿಕೆ ನೀಡಿದರು. ಟೀಂ ಇಂಡಿಯಾದ ಎಲ್ಲ ಆಟಗಾರರು ಈ ಪಂದ್ಯದಲ್ಲಿ ಸಿಕ್ಸ್ ಹೊಡೆದಿರುವುದು ವಿಶೇಷ. ಕೆ.ಎಲ್.ರಾಹುಲ್ ಹಾಗೂ ಅಯ್ಯರ್ ತಲಾ 3 ಸಿಕ್ಸರ್ ಸಿಡಿಸಿದರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ದುಬೆ, ಮನೀಷ್ ಪಾಂಡೆ ತಲಾ ಒಂದೊಂದು ಸಿಕ್ಸ್ ಹೊಡೆದರು. 5 ಟಿ-20 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಅಂತರದಲ್ಲಿ ಮುನ್ನಡೆ ಪಡೆದಿದ್ದು, 2ನೇ ಟಿ20 ಪಂದ್ಯ ಭಾನುವಾರ ನಡೆಯಲಿದೆ.

Comments

Leave a Reply

Your email address will not be published. Required fields are marked *