India vs New Zealand: ಜಡೇಜಾ, ಅಶ್ವಿನ್‌ ಸ್ಪಿನ್‌ ಜಾದು – ಟೀಂ ಇಂಡಿಯಾ ಹಿಡಿತದಲ್ಲಿ 3ನೇ ಟೆಸ್ಟ್‌

ಮುಂಬೈ: ರವೀಂದ್ರ ಜಡೇಜಾ ಮತ್ತು ಆರ್‌.ಅಶ್ವಿನ್‌ ಸ್ಪಿನ್‌ ಮೋಡಿಯಿಂದ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸಿದೆ. ನ್ಯೂಜಿಲೆಂಡ್‌ 2ನೇ ದಿನದಾಟದ ಅಂತ್ಯಕ್ಕೆ 171 ರನ್‌ ಗಳಿಸಿದ್ದು, 9 ವಿಕೆಟ್‌ ಕಳೆದುಕೊಂಡಿದೆ. ಆ ಮೂಲಕ 143 ರನ್‌ಗಳ ಮುನ್ನಡೆ ಸಾಧಿಸಿದೆ.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 28 ರನ್‌ಗಳ ಅಲ್ಪ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ ಅನ್ನು ಟೀಂ ಇಂಡಿಯಾ ಸಂಘಟಿತ ಬೌಲಿಂಗ್‌ನಿಂದ ಕಟ್ಟಿ ಹಾಕಿತು.

ನ್ಯೂಜಿಲೆಂಡ್‌ ತಂಡದ ನಾಯಕ ಟಾಮ್‌ ಲೇಥಮ್‌ನನ್ನು (1 ರನ್) ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಟೀಂ ಇಂಡಿಯಾ ಬೌಲರ್‌ ಆಕಾಶ್‌ ದೀಪ್‌ ಪೆವಿಲಿಯನ್‌ಗೆ ಅಟ್ಟಿದರು.‌ ಅವರ ಜೊತೆಗೆ ಡೆವೋನ್‌ ಕಾನ್ವೆ (22) ವಿಕೆಟ್‌ ಅನ್ನು 13ನೇ ಓವರ್‌ನಲ್ಲಿ ವಾಷಿಂಗ್ಟನ್‌ ಸುಂದರ್‌ ಉರುಳಿಸಿದರು.

ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾ ಮತ್ತು ಆರ್‌.ಅಶ್ವಿನ್‌ ಮೋಡಿ ಮಾಡಿದರು. ಜಡೇಜಾ ದಿನದಾಟದ ಅಂತ್ಯದ ಕೊನೆ ಬಾಲ್‌ನಲ್ಲಿ ವಿಕೆಟ್‌ ಬೀಳಿಸುವ ಮೂಲಕ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಗೊಂಚಲು ಪಡೆದರು. ಅಶ್ವಿನ್‌ ಮೂರು ವಿಕೆಟ್‌ ಕಿತ್ತು ನ್ಯೂಜಿಲೆಂಡ್‌ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದರು.

ಟೀಂ ಇಂಡಿಯಾದ ಉತ್ತಮ ಬೌಲಿಂಗ್‌ ಪ್ರದರ್ಶನದ ನಡುವೆಯೂ ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದ ಕಿವೀಸ್‌ ಪಡೆದ ವಿಲ್‌ ಯಂಗ್‌ (51) ಅರ್ಧಶತಕ ಗಳಿಸಿದರು. ಡೇರಿಲ್ ಮಿಚೆಲ್ (22), ಗ್ಲೆನ್ ಫಿಲಿಪ್ಸ್ (26) ಬ್ಯಾಟಿಂಗ್‌ ನೆರವಿನಿಂದ ನ್ಯೂಜಿಲೆಂಡ್‌ ಎರಡನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್‌ ಕಳೆದುಕೊಂಡು 171 ರನ್‌ ಗಳಿಸಿತು. ಆ ಮೂಲಕ 143 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಮೂರು ದಿನಗಳ ಆಟ ಬಾಕಿ ಇದೆ.

ಟೆಸ್ಟ್‌ ಸರಣಿಯ ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 235 ರನ್‌ಗಳಿಗೆ ಆಲೌಟ್‌ ಆಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇನ್ನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಶುಭಮನ್‌ ಗಿಲ್‌ (90) ಮತ್ತು ರಿಷಭ್‌ ಪಂತ್‌ (60) ಬಲ ತುಂಬಿದರು. ಕೊನೆಯಲ್ಲಿ ವಾಷಿಂಗ್ಟನ್‌ ಸುಂದರ್‌ (38 ರನ್) ಉಪಯುಕ್ತ ಆಟವಾಡಿದ್ದರಿಂದ ಭಾರತ‌ 263 ರನ್‌ ಗಳಿಸಲು ಸಾಧ್ಯವಾಯಿತು. ಆ ಮೂಲಕ ನ್ಯೂಜಿಲೆಂಡ್‌ ಎದುರು ಅಲ್ಪ ಮುನ್ನಡೆ ಸಾಧಿಸಿತ್ತು.