ಜಡೇಜಾ ವಿರೋಚಿತ ಆಟಕ್ಕೆ ಸೈನಿ ಸಾಥ್- ಭಾರತಕ್ಕೆ ಸೋಲು, ನ್ಯೂಜಿಲೆಂಡಿಗೆ ಸರಣಿ

– ಕೊನೆಯವರೆಗೂ ಹೋರಾಡಿದ ಜಡೇಜಾ
– 45 ರನ್, 5 ಬೌಂಡರಿ, 2 ಸಿಕ್ಸರ್ ಸಿಡಿಸಿದ ಸೈನಿ
– ಸೈನಿ ಸಿಕ್ಸ್‌ಗೆ ಕೊಹ್ಲಿ ಫುಲ್ ಫಿದಾ
– 6 ವರ್ಷದ ಬಳಿಕ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದ ಕಿವೀಸ್
– ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಕಿವೀಸ್‍ಗೆ 350ನೇ ಗೆಲುವು

ಆಂಕ್ಲೆಂಡ್: 96 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಭಾರತ ಶೀಘ್ರವೇ ಪತನ ಹೊಂದುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಬೌಲಿಂಗ್, ಫೀಲ್ಡಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ರವೀಂದ್ರ ಜಡೇಜಾ ಬ್ಯಾಟಿಂಗ್‍ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ತಾನೊಬ್ಬ ಸಮರ್ಥ ಆಲ್‍ರೌಂಡರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಭಾರತಕ್ಕೆ ಹೀನಾಯ ಸೋಲು ಖಚಿತ ಎಂದೇ ಭಾವಿಸಲಾಗಿದ್ದ ಪಂದ್ಯಕ್ಕೆ ರೋಚಕ ತಿರುವು ನೀಡಿ ವಿಕೆಟ್ ಒಪ್ಪಿಸಿದ್ದರೂ ಉತ್ತಮ ಆಟದಿಂದ ಜಡೇಜಾ ಭಾರತದ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಭಾರತದ ವಿರುದ್ಧ ಎರಡನೇ ಏಕದಿನ ಪಂದ್ಯವನ್ನು ನ್ಯೂಜಿಲೆಂಡ್ 22 ರನ್ ಗಳಿಂದ ಗೆದ್ದರೂ ಜಡೇಜಾ ಮತ್ತು ನವದೀಪ್ ಸೈನಿಯ ಆಟ ಮೆಚ್ಚುಗೆ ಗಳಿಸಿತು. ಭಾರತ 150 ರನ್ ಗಳಿಸುವುದು ಅನುಮಾನ ಎಂದು ವ್ಯಕ್ತವಾಗಿದ್ದರೂ ಇವರಿಬ್ಬರು 8ನೇ ವಿಕೆಟಿಗೆ 80 ಎಸೆತಗಳಲ್ಲಿ 79 ರನ್ ಜೊತೆಯಾಟವಾಡಿ ಭಾರತ ಸುಲಭವಾಗಿ ಸೋಲುವುದಿಲ್ಲ. ಕೊನೆಯವರೆಗೂ ಹೋರಾಟ ಮಾಡುತ್ತದೆ ಎಂಬುದನ್ನು ಸಾಧಿಸಿ ತೋರಿಸಿದರು. 45ನೇ ಓವರಿನಲ್ಲಿ ಸೈನಿ ಬೌಲ್ಡ್ ಆದ ಬಳಿಕ ಚಹಲ್ ಮತ್ತು ಕೊನೆಯವರೆಗೂ ವಿರೋಚಿತ ಆಟವಾಡಿದ್ದ ಜಡೇಜಾ ಸಿಕ್ಸ್ ಹೊಡೆಯಲು ಹೋಗಿ ಬೌಂಡರಿ ಗೆರೆ ಸಮೀಪ ಕ್ಯಾಚ್ ನೀಡಿ ಔಟಾಗುವುದರೊಂದಿಗೆ ಭಾರತ ಸರಣಿಯನ್ನು ಸೋತಿತು. ಈ ಮೂಲಕ ಟ20ಯಲ್ಲಿ ವೈಟ್ ವಾಶ್‍ನೊಂದಿಗೆ ಸೋತಿದ್ದ ನ್ಯೂಜಿಲೆಂಡ್ ಏಕದಿನ ಸರಣಿಯನ್ನು ಗೆದ್ದುಕೊಂಡಿದ್ದು, ಕ್ಲೀನ್ ಸ್ವೀಪ್ ಮಾಡಲು ಒಂದು ಹೆಜ್ಜೆ ಮಾತ್ರ ಬಾಕಿಯಿದೆ. ಇದನ್ನೂ ಓದಿ: ಜಡೇಜಾ ರಾಕೆಟ್ ಥ್ರೋ, ಸ್ಟನ್ ಆದ ನೀಶಮ್ – ವಿಡಿಯೋ ನೋಡಿ

ಆಕ್ಲೆಂಡ್‍ನ ಈಡನ್ ಪಾರ್ಕ್ ನಲ್ಲಿ 274 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾ 48.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 251 ರನ್ ಗಳಿಸಲು ಶಕ್ತವಾಯಿತು. ಶ್ರೇಯಸ್ ಅಯ್ಯರ್ 52 ರನ್ (57 ಎಸೆತ, 7 ಬೌಂಡರಿ, 1 ಸಿಕ್ಸ್), ರವೀಂದ್ರ ಜಡೇಜಾ 55 ರನ್ (73 ಎಸೆತ, 2 ಬೌಂಡರಿ, 1 ಸಿಕ್ಸ್) ಹಾಗೂ ನವದೀಪ್ ಸೈನಿ 45 ರನ್ (49 ಎಸೆತ, 5 ಬೌಂಡರಿ, 2 ಸಿಕ್ಸ್) ಹೊಡೆದರು. ಇಂದು ಭಾರತದ ವಿರುದ್ಧ ಗೆದ್ದ ನ್ಯೂಜಿಲೆಂಡ್ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 350ನೇ ಗೆಲುವು ದಾಖಲಿಸಿತು.

ಆರಂಭದಲ್ಲೇ ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡು ಭಾರತ ಆಘಾತಕ್ಕೆ ಒಳಗಾಯಿತು. ಬಳಿಕ ಮೈದಾಕ್ಕಿಳಿದ ವಿರಾಟ್ ಕೊಹ್ಲಿ ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್‍ಗೆ ಮುಂದಾದರು. ಆದರೆ 24 ರನ್ ಗಳಿಸಿದ್ದ ಆರಂಭಿಕ ಬ್ಯಾಟ್ಸ್‍ಮನ್ ಪೃಥ್ವಿ ಶಾ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತರೆಳಿದರು. ಇದನ್ನೂ ಓದಿ: ಅಂಪೈರ್ ವಿರುದ್ಧ ಕೊಹ್ಲಿ ಫುಲ್ ಗರಂ- ವಿಡಿಯೋ

ವಿರಾಟ್ ಕೊಹ್ಲಿ ಜೊತೆ ಸೇರಿದ ಶ್ರೇಯಸ್ ಅಯ್ಯರ್ ಉತ್ತಮ ಇನ್ನಿಂಗ್ಸ್ ಕಟ್ಟಲು ಯತ್ನಿಸಿದರು. ಆದರೆ 15 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾಕ್ಕಿಳಿದ ಕೆ.ಎಲ್.ರಾಹುಲ್ 4 ರನ್ ಹಾಗೂ ಕೇದಾರ್ ಜಾಧವ್ 9 ರನ್ ಗಳಿಸಿ ಬಹುಬೇಗ ವಿಕೆಟ್ ಕಳೆದುಕೊಂಡರು. ಪರಿಣಾಮ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ ಕೇವಲ 96 ರನ್ ಗಳಿಸಿತು.

ಶ್ರೇಯಸ್ ಅರ್ಧಶತಕ:
ನಿಧಾನಗತಿಯ ಬ್ಯಾಟಿಂಗ್ ಮೂಲಕ ವಿಕೆಟ್ ಕಾಯ್ದುಕೊಂಡು ಆಡುತ್ತಿದ್ದ ಶ್ರೇಯಸ್ ಅಯ್ಯರ್ 56ನೇ ಎಸೆತದಲ್ಲಿ ಅರ್ಧಶತ ದಾಖಲಿಸಿದರು. ಆದರೆ ನಂತದ ಎಸೆತದಲ್ಲಿ ಸ್ಫೋಟಕ ಹೊಡೆತಕ್ಕೆ ಮುಂದಾಗಿ ವಿಕೆಟ್ ಕಳೆದುಕೊಂಡರು.

ಜಡೇಜಾ ಏಕಾಂಗಿ ಹೋರಾಟ:
ಟೀಂ ಇಂಡಿಯಾ ಆಲ್‍ರೌಂಡರ್ ರವೀಂದ್ರ್ ಜಡೇಜಾ ಅಂತಿಮ ಹಂತದವರೆಗೂ ಬೌಲರ್‍ಗಳ ಜೊತೆ ಸೇರಿ ರನ್ ಗಳಿಸಲು ಯತ್ನಿಸಿದರು. ಶಾರ್ದೂಲ್ ಠಾಕೂರ್ ಜೊತೆ ಸೇರಿ 7ನೇ ವಿಕೆಟ್‍ಗೆ 26 ರನ್ ಜೊತೆಯಾಟ, ನವದೀಪ್ ಸೈನಿ ಜೊತೆ ಸೇರಿ 8ನೇ ವಿಕೆಟ್‍ಗೆ 76 ರನ್ ಜೊತೆಯಾಟದ ಕೊಡುಗೆ ನೀಡಿದರು. ಬಳಿಕ ಯಜುವೇಂದ್ರ ಚಹಲ್‍ರೊಂದಿಗೆ 9ನೇ ವಿಕೆಟ್‍ಗೆ 22 ರನ್ ಜೊತೆಯಾಟವಾಡಿದರು. ಕೊನೆಯವರೆಗೂ ಏಕಾಂಗಿ ಹೋರಾಡಿದ್ದ ಜಡೇಜಾ 48.3 ಎಸೆತವನ್ನು ಸಿಕ್ಸರ್ ಗೆ ಅಟ್ಟಲು ಹೋಗಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಮಾರ್ಟಿನ್ ಗುಪ್ಟಿಲ್ 79 ರನ್, ಹೆನ್ರಿ ನಿಕೋಲ್ಸ್ 41 ರನ್ ಮತ್ತು ರಾಸ್ ಟೇಲರ್ 73 ರನ್ ಹೊಡೆದರು. ಯಜುವೇಂದ್ರ ಚಹಲ್ 3 ವಿಕೆಟ್, ಶಾರ್ದೂಲ್ ಠಾಕೂರ್ 2 ವಿಕೆಟ್ ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.

ಕೊಹ್ಲಿ ವರ್ಸಸ್ ಸೌಥಿ:
ಎಲ್ಲಾ ಮೂರು ಸ್ವರೂಪಗಳಲ್ಲಿ (ಏಕದಿನ, ಟಿ 20 ಮತ್ತು ಟೆಸ್ಟ್) ಕೊಹ್ಲಿಯನ್ನು ಟಿಮ್ ಸೌಥಿ ಒಂಬತ್ತು ಬಾರಿ ಔಟ್ ಮಾಡಿದ್ದಾರೆ. ಇಂಗ್ಲೆಂಡ್‍ನ ಜೇಮ್ಸ್ ಆಂಡರ್ಸನ್ ಮತ್ತು ಗ್ರೇಮ್ ಸ್ವಾನ್ ಅವರು ತಲಾ 8 ಬಾರಿ ಕೊಹ್ಲಿಯನ್ನು ಪೆವಿಲಿಯನ್‍ಗೆ ಕಳುಹಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಸೌಥಿ ಮತ್ತು ವೆಸ್ಟ್ ಇಂಡೀಸ್ ರವಿ ರಾಂಪಾಲ್ ತಲಾ ಆರು ಬಾರಿ ವಿರಾಟ್ ವಿಕೆಟ್ ಕಿತ್ತಿದ್ದಾರೆ. ಶ್ರೀಲಂಕಾದ ಟಿಸರಾ ಪೆರೆರಾ ಮತ್ತು ಆಸ್ಟ್ರೇಲಿಯಾದ ಆಡಮ್ ಜಂಪಾ 5-5 ಬಾರಿ ಕೊಹ್ಲಿ ಅವರನ್ನು ಔಟ್ ಮಾಡಿದ್ದಾರೆ.

5 ಏಕದಿನ ಪಂದ್ಯಗಳಲ್ಲಿ ಬುಮ್ರಾಗೆ 1 ವಿಕೆಟ್:
ವೇಗದ ಬೌಲರ್ ಬುಮ್ರಾ ಗಾಯದ ನಂತರ ಈ ವರ್ಷ ತಂಡಕ್ಕೆ ಮರಳಿದ್ದಾರೆ. ಅಂದಿನಿಂದ ಅವರು 5 ಏಕದಿನ ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಅನ್ನು 277 ಸ್ಟ್ರೈಕ್ ದರದಲ್ಲಿ ಪಡೆದಿದ್ದಾರೆ. ಕಳೆದ ಮೂರು ಏಕದಿನ ಪಂದ್ಯಗಳಲ್ಲಿ ಅವರು ಯಾವುದೇ ವಿಕೆಟ್ ಕಿತ್ತಿಲ್ಲ. ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇಂತಹ ಕೆಟ್ಟ ಫಾರ್ಮ್ ಗೆ ಬುಮ್ರಾ ತುತ್ತಾಗಿದ್ದಾರೆ.

ಭಾರತ ವಿರುದ್ಧ ಟೇಲರ್ ಸಾಧನೆ:
ಸತತ ಎರಡನೇ ಏಕದಿನ ಪಂದ್ಯದಲ್ಲಿ ರಾಸ್ ಟೇಲರ್ ಅರ್ಧಶತಕ ಬಾರಿಸಿದರು. ಅವರು ಭಾರತ ವಿರುದ್ಧ ಅತಿ ಹೆಚ್ಚು 11 ಅರ್ಧಶತಕಗಳನ್ನು ಗಳಿಸಿದ ಕಿವಿ ಆಟಗಾರರಾಗಿದ್ದಾರೆ. ಇದಕ್ಕೂ ಮುನ್ನ ನಾಥನ್ ಆಸ್ಟಲ್ 10 ಬಾರಿ ಅರ್ಧಶಕತ ಸಿಡಿಸಿದ್ದರು.

ಭಾರತವು 6 ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಭಾರತ ಸರಣಿಯಲ್ಲಿ ತಂಡವು 0-2ರ ಹಿನ್ನಡೆಗೆ ತುತ್ತಾಗಿದೆ. ಕೊನೆಯ ಬಾರಿಗೆ ಅಂದ್ರೆ 2014ರಲ್ಲಿ ನ್ಯೂಜಿಲೆಂಡ್ ಭಾರತವನ್ನು 4-0 ಗೋಲುಗಳಿಂದ ಸೋಲಿಸಿತ್ತು. ಕಳೆದ ಮೂರು ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು.

Comments

Leave a Reply

Your email address will not be published. Required fields are marked *