2 ದಿನಗಳಲ್ಲಿ ಕೇವಲ 4 ಗಂಟೆ ಮಲಗಿ 3 ವಿಕೆಟ್ ಕಿತ್ತು ಮಿಂಚಿದ ಇಶಾಂತ್

– ಭಾರತ ಭರವಸೆ ಜೀವಂತವಾಗಿಸಿದ ಶರ್ಮಾ

ವೆಲ್ಲಿಂಗ್ಟನ್: ಟೀಂ ಇಂಡಿಯಾ ವೇಗ ಬೌಲರ್ ಇಶಾಂತ್ ಶರ್ಮಾ ಕಳೆದ ಎರಡು ದಿನಗಳಲ್ಲಿ ಕೇವಲ 4 ಗಂಟೆಗಳ ಕಾಲ ಮಲಗಿದ್ದಾರೆ. ಇದರ ಹೊರತಾಗಿಯೂ ಅವರು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್‍ಗಳನ್ನು ಕಬಳಿಸುವ ಮೂಲಕ ಭಾರತದ ಭರವಸೆಯನ್ನು ಜೀವಂತವಾಗಿರಿಸಿದ್ದಾರೆ. ಆದಾಗ್ಯೂ, ತಮ್ಮ ಬೌಲಿಂಗ್ ಪ್ರದರ್ಶನ ತೃಪ್ತಿ ನೀಡಿಲ್ಲ ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ.

ಎರಡನೇ ದಿನದ ಆಟ ಮುಗಿದ ಬಳಿಕ ಮಾತನಾಡಿದ ಇಶಾಂತ್, ನನ್ನ ಬೌಲಿಂಗ್ ಪ್ರದರ್ಶನದಿಂದ ನಾನು ಸಂತೋಷವಾಗಿಲ್ಲ. ಏಕೆಂದರೆ ಕಳೆದ ಎರಡು ದಿನಗಳಿಂದ ನಾನು ಮಲಗಲಿಲ್ಲ. ಇದು ನನ್ನ ಬೌಲಿಂಗ್ ಮೇಲೆ ಪರಿಣಾಮ ಬೀರಿತು. ಹೇಗೆ ಬೌಲಿಂಗ್ ಮಾಡಬೇಕು ಎಂದುಕೊಂಡಿದ್ದೆನೋ ಹಾಗೆ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ತಂಡವು ನನ್ನನ್ನು ಆಡಲು ಕೇಳಿದ ತಕ್ಷಣವೇ ಮೈದಾಕ್ಕೆ ಇಳಿಯಲು ಮುಂದಾದೆ. ತಂಡಕ್ಕಾಗಿ ಏನು ಬೇಕಾದರೂ ಮಾಡಲು ನಾನು ಸಿದ್ಧನಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ವಿನಾಕಾರಣ ರನೌಟ್ ಆಗಿ ಟೀಕೆಗೆ ಗುರಿಯಾದ ಪಂತ್- ವಿಡಿಯೋ

ಇಶಾಂತ್ ಮೂರು ದಿನಗಳ ಹಿಂದೆ 24 ಗಂಟೆಗಳ ಪ್ರಯಾಣದ ಮೂಲಕ ನ್ಯೂಜಿಲೆಂಡ್‍ಗೆ ಆಗಮಿಸಿದ್ದರು. ಇದೇ ವಿಚಾರವಾಗಿ ಮಾತನಾಡಿದ ಅವರು, ಕಳೆದ ರಾತ್ರಿ ನಾನು ಕೇವಲ 40 ನಿಮಿಷ ಮಾತ್ರ ನಿದ್ರೆ ಮಾಡಲು ಸಾಧ್ಯವಾಯಿತು. ಟೆಸ್ಟ್ ಪಂದ್ಯದ ಮೊದಲು ನಾನು ದಿನ 3 ಗಂಟೆ ಮಾತ್ರ ಮಲಗಿದ್ದೆ ಎಂದರು.

ಪಾದದ ನೋವಿನ ನಂತರ ಟೆಸ್ಟ್ ಆಡುವ ಬಗ್ಗೆ ಯೋಚಿಸಿರಲಿಲ್ಲ. ಆದರೆ ನನ್ನ ಆಟದ ಶ್ರೇಯಸ್ಸು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಸಹಾಯಕ ಸಿಬ್ಬಂದಿಗೆ ಸಲ್ಲುತ್ತದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಏಕೆಂದರೆ ಪಾದದ ಸ್ನಾಯುಗಳಿಗೆ ಗಂಭೀರವಾದ ಗಾಯವಾಗಿದೆ ಅಂತ ಎಂಆರ್‍ಐ ಸ್ಕ್ಯಾನ್‍ನಲ್ಲಿ ತಿಳಿಸಲಾಗಿತ್ತು. ತಜ್ಞರು 6 ವಾರಗಳ ಕಾಲ ವಿಶ್ರಾಂತಿ ನೀಡುವಂತೆ ಸಲಹೆ ನೀಡಿದ್ದರು. ಆದರೆ ನಾನು ಬೇಗ ಚೇತರಿಸಿಕೊಳ್ಳಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಸಹಾಯಕ ಸಿಬ್ಬಂದಿ ಶ್ರಮಿಸಿದರು ಎಂದು ನೆನೆದರು.

ವೆಲ್ಲಿಂಗ್ಟನ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್‍ಗೆ 216 ರನ್ ಗಳಿಸಿದೆ. ಇದಕ್ಕೂ ಮುನ್ನ ಭಾರತದ ಎರಡನೇ ದಿನದಾಟವಾಡಿ 165 ರನ್ ಆಲೌಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಿವಿ ತಂಡವು ಭಾರತಕ್ಕಿಂತ 51 ರನ್‍ಗಳ ಮುನ್ನಡೆ ಸಾಧಿಸಿದೆ.

ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸನ್ 89 ರನ್, ರಾಸ್ ಟೇಲರ್ 44 ರನ್, ಟಾಮ್ ಬ್ಲೆಂಡಾಲ್ 30 ರನ್, ಬಿಜೆ ವಾಟ್ಲಿಂಗ್ ಅಜೇಯ 14 ರನ್ ಹಾಗೂ ಕಾಲಿನ್ ಡಿ ಗ್ರ್ಯಾಂಡ್‍ಹೋಮ್ ಔಟಾಗದೆ 4 ರನ್ ಗಳಿಸಿದ್ದಾರೆ. ಇದೇ ಸಮಯದಲ್ಲಿ ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 1 ವಿಕೆಟ್ ಕಿತ್ತರು.

Comments

Leave a Reply

Your email address will not be published. Required fields are marked *