ಜೈಸ್ವಾಲ್‌, ಜಡೇಜಾ ಶೈನ್‌; ಆಂಗ್ಲರ ವಿರುದ್ಧ ಭಾರತಕ್ಕೆ 434 ರನ್‌ ಗೆಲುವು – ಟೆಸ್ಟ್‌ ಸರಣಿ ಕೈವಶಕ್ಕೆ ಇನ್ನೊಂದೇ ಹೆಜ್ಜೆ

ರಾಜ್‌ಕೋಟ್‌: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಅಮೋಘ ದ್ವಿಶತಕ ಮತ್ತು ಜಡೇಜಾ ಸ್ಪಿನ್‌ ದಾಳಿ (5 ವಿಕೆಟ್‌ ನೆರವಿನಿಂದ ಭಾರತ ತಂಡ 434 ರನ್‌ಗಳಿಂದ ಗೆದ್ದು ಬೀಗಿದೆ. ಆ ಮೂಲಕ 5 ಟೆಸ್ಟ್‌ ಸರಣಿಯ ಕೈವಶ ಮಾಡಿಕೊಳ್ಳಲು ಇನ್ನೊಂದು ಹೆಜ್ಜೆ ಬಾಕಿ ಇದೆ.

ಟೀಂ ಇಂಡಿಯಾ ನೀಡಿದ್ದ 557 ರನ್‌ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 122ಕ್ಕೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಸೋಲನುಭವಿಸಿತು. 5 ಟೆಸ್ಟ್‌ ಸರಣಿಯಲ್ಲಿ ಈಗ ಭಾರತ 2 ಪಂದ್ಯಗಳನ್ನು ಗೆದ್ದಿದೆ. ಇಂಗ್ಲೆಂಡ್‌ ಒಂದು ಪಂದ್ಯ ಗೆದ್ದಿದೆ. ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: ಟೀಂ ಇಂಡಿಯಾಗೆ 434 ರನ್‌ಗಳ ದಾಖಲೆ ಜಯ – ಭಾರತದ ಟಾಪ್-5 ಟೆಸ್ಟ್ ಲಿಸ್ಟ್!

557 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ತಂಡದ ಬ್ಯಾಟಿಂಗ್‌ಗೆ ಆಧಾರವಾಗಿ ಯಾರೂ ನಿಲ್ಲಲೇ ಇಲ್ಲ. ತಂಡದ ಮೊತ್ತ 28 ರನ್ ಆದಾಗ ಇಂಗ್ಲೆಂಡ್ ಆಗಲೇ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಮೊದಲ ಇನ್ನಿಂಗ್ಸ್‌ನಲ್ಲಿ 153 ರನ್‌ಗಳ ಸ್ಫೋಟಕ ಆಟವಾಡಿದ್ದ ಆರಂಭಿಕ ಆಟಗಾರ ಬೆನ್ ಡಕೆಟ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 4 ರನ್ ಗಳಿಸಿ ಔಟಾದರು.

6ನೇ ಓವರ್‌ನಲ್ಲಿ ಇಂಗ್ಲೆಂಡ್ ತಂಡ 15 ರನ್ ಗಳಿಸಿದ್ದಾಗ ಡಕೆಟ್ ಔಟಾದರು. ಮತ್ತೆ ಮೂರು ರನ್ ಸೇರಿಸುವಷ್ಟರಲ್ಲಿ ಇನ್ನೊಬ್ಬ ಆರಂಭಿಕ ಆಟಗಾರ ಝಕ್ ಕ್ರಾಲಿ 11 ರನ್ ಗೆ ಔಟಾದರು. ಬೂಮ್ರಾ ಎಸೆತಕ್ಕೆ ಕ್ರಾಲಿ ಎಲ್‌ಬಿಡಬ್ಲ್ಯೂಗೆ ಬಲಿಯಾದರು. ಇದನ್ನೂ ಓದಿ: ತಾಯಿ ಆಸ್ಪತ್ರೆಯಲ್ಲಿದ್ದರೂ ದೇಶಕ್ಕಾಗಿ ಓಡೋಡಿ ಬಂದ ಅಶ್ವಿನ್‌!

10ನೇ ಓವರ್‌ನಲ್ಲಿ ಜಡೇಜಾ ಎಸೆತಕ್ಕೆ ಬ್ಯಾಟ್ ಬೀಸಿದ ಓಲ್ಲಿ ಪೊಪೆ 3 ರನ್ ಗಳಿಸಿ ಔಟಾದರು. 12ನೇ ಓವರ್‌ನಲ್ಲಿ ಜಾನಿ ಬೇರ್‌ಸ್ಟೋ 4 ರನ್ ಗಳಿಸಿ ರವೀಂದ್ರ ಜಡೇಜಾಗೆ ಎಲ್‌ಬಿಡಬ್ಲ್ಯೂಗೆ ಬಲಿಯಾದರು.

ತಂಡದ ಮೊತ್ತ 50 ತಲುಪಿದಾಗ ಇಂಗ್ಲೆಂಡ್ ಮತ್ತೆ 3 ವಿಕೆಟ್ ಕಳೆದುಕೊಂಡಿತು. ಜೋ ರೂಟ್ 4 ರನ್ ಗೆ ಔಟಾದರೆ, ಬೆನ್ ಸ್ಟೋಕ್ಸ್ 15 ಹಾಗೂ ರೆಹಾನ್ ಅಹ್ಮದ್ ಶೂನ್ಯ ಸುತ್ತಿ ಪೆವಿಲಿಯನ್‌ನತ್ತ ಮುಖ ಮಾಡಿದರು.

36ನೇ ಓವರ್‌ನಲ್ಲಿ ಬೆನ್ ಫೋಕ್ಸ್ 16 ರನ್ ಗಳಿಸಿ ಜಡೇಜಾ ಬೌಲಿಂಗ್‌ನಲ್ಲಿ ಔಟಾದರು. 37ನೇ ಓವರ್‌ನಲ್ಲಿ ತಂಡದ ಮೊತ್ತ 91 ತಲುಪಿದಾಗ ಟಾಮ್ ಹಾರ್ಟ್ಲಿ ಔಟಾದರು. ಕೊನೆಯದಾಗಿ ಮಾರ್ಕ್ ವುಡ್ 33 ರನ್ ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು.

ಜಡೇಜಾಗೆ 5 ವಿಕೆಟ್
ಟೀಂ ಇಂಡಿಯಾ ಪರವಾಗಿ ಜಡೇಜಾ 5, ಕುಲ್ದೀಪ್ ಯಾದವ್ 2, ಜಸ್ಪ್ರಿತ್‌ ಬೂಮ್ರಾ 1 ಹಾಗೂ ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು. ಇದನ್ನೂ ಓದಿ: India vs England, 3rd Test – ಜೈಸ್ವಾಲ್ ದ್ವಿಶತಕ – ಇಂಗ್ಲೆಂಡ್‍ಗೆ 557 ರನ್ ಗುರಿ ನೀಡಿದ ಟೀಂ ಇಂಡಿಯಾ

ಮತ್ತೆ ಟೀಂ ಸೇರಿಕೊಂಡ ಅಶ್ವಿನ್
ಫ್ಯಾಮಿಲಿ ಎಮರ್ಜೆನ್ಸಿ ಎಂದು ರಾಜ್‌ಕೋಟ್‌ನಿಂದ ಹೊರಟಿದ್ದ ರವಿಚಂದ್ರನ್ ಅಶ್ವಿನ್ ಇಂದು ಮತ್ತೆ ತಂಡಕ್ಕೆ ವಾಪಾಸ್ ಆದರು. ಈ ಪಂದ್ಯಲ್ಲಿ 1 ವಿಕೆಟ್ ಪಡೆದರು.