ದುಬೈ: ಆರಂಭದಲ್ಲಿ ಉತ್ತಮ ಆರಂಭ ಪಡೆದರೂ ನಂತರ ಭಾರತೀಯ ಬೌಲರ್ ಗಳ ಉತ್ತಮ ಪ್ರದರ್ಶನದಿಂದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ 48.3 ಓವರ್ ಗಳಲ್ಲಿ 222 ರನ್ ಗಳಿಗೆ ಆಲೌಟ್ ಆಗಿದೆ.
ಒಂದು ಹಂತದಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 120 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಬಾಂಗ್ಲಾ 31 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡ ಪರಿಣಾಮ ಸಾಧಾರಣ ಮೊತ್ತ ಪೇರಿಸಿದೆ. ಧೋನಿ ಈ ಪಂದ್ಯದಲ್ಲಿ 2 ಸ್ಟಂಪ್ ಮಾಡಿ ಬಾಂಗ್ಲಾ ರನ್ ಗೆ ಕಡಿವಾಣ ಹಾಕಿದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ತಂಡಕ್ಕೆ ಮೊದಲ ವಿಕೆಟ್ ಗೆ ಲಿಟನ್ ದಾಸ್ ಮತ್ತು ಮೆಹಿದಿ ಹಸನ್ ಮಿರಜ್ 20.5 ಓವರ್ ಗಳಲ್ಲಿ 120 ರನ್ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದರು. ಮೆಹಿದಿ 32 ರನ್(59 ಎಸೆತ, 3 ಬೌಂಡರಿ) ಗಳಿಸಿದ್ದಾಗ ಕ್ಯಾಚ್ ನೀಡಿ ಔಟಾಗಿದ್ದೆ ತಡ ಬಾಂಗ್ಲಾದ ಕುಸಿತ ಆರಂಭವಾಯಿತು. ನಂತರ ಬಂದ ಇಮ್ರಾಲ್ 2 ರನ್, ಮುಷ್ಫಿಕರ್ ರಹೀಂ 5 ರನ್, ಮೊಹಮ್ಮದ್ ಮಿಥುನ್ 2 ರನ್, ಮೊಹಮ್ಮದುಲ್ಲ 4 ರನ್ ಗಳಿಸಿ ಔಟಾದರು.

151 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದರೂ 107 ಎಸೆತದಲ್ಲಿ ಮೊದಲ ಶತಕ ಸಿಡಿಸಿದ ಲಿಟನ್ ದಾಸ್ ಅಂತಿಮವಾಗಿ 121 ರನ್(117 ಎಸೆತ, 12 ಬೌಂಡರಿ, 2 ಸಿಕ್ಸರ್) ಸಿಡಿಸಿ ಔಟಾದರು. ಕುಲ್ದೀಪ್ ಯಾದವ್ ಬೌಲಿಂಗ್ ನಲ್ಲಿ ಧೋನಿ ಸ್ಟಂಪ್ ಮಾಡಿ ಲಿಟನ್ ದಾಸ್ ಅವರನ್ನು ಔಟ್ ಮಾಡಿದರು.
ಮಧ್ಯಮ ಕ್ರಮಾಂಕದಲ್ಲಿ ಸೌಮ್ಯಾ ಸರ್ಕಾರ್ ಸ್ವಲ್ಪ ಪ್ರತಿರೋಧ ತೋರಿದ ಕಾರಣ ಬಾಂಗ್ಲಾ ಮೊತ್ತ 200ರ ಗಡಿ ದಾಟಿತು. ಸೌಮ್ಯಾ ಸರ್ಕಾರ್ 33 ರನ್(45 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು. ಕುಲ್ದೀಪ್ ಯಾದವ್ 3 ಪಡೆದು ಮಿಂಚಿದರೆ ಕೇದಾರ್ ಜಾದವ್ 2, ಜಸ್ ಪ್ರೀತ್ ಬುಮ್ರಾ ಮತ್ತು ಚಹಲ್ 1 ವಿಕೆಟ್ ಕಿತ್ತರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

Leave a Reply