4 ವಿಕೆಟ್ ಕಿತ್ತು ಆಸೀಸ್‍ಗೆ ಕಾಡಿದ ಶಮಿ- ಕೊಹ್ಲಿ ಪಡೆಗೆ 287ರ ಗುರಿ

– ಸ್ಮಿತ್ ತಾಳ್ಮೆಯ ಶತಕ, ಲಾಬುಶೇನ್ ಅರ್ಧಶತಕ
– ಆಸೀಸ್‍ಗೆ ಆರಂಭದಲ್ಲಿ, ಕೊನೆಯಲ್ಲಿ ಆಘಾತ ನೀಡಿದ ಶಮಿ
– ಶೂನ್ಯ ರನ್ ಅಂತರದಲ್ಲಿ ಎರಡು ವಿಕೆಟ್ ಕಿತ್ತ ಜಡೇಜಾ

ಬೆಂಗಳೂರು: ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಅವರ ಅದ್ಭುತ ಬೌಲಿಂಗ್ ಎದುರು ಸ್ಟೀವ್ ಸ್ಮಿತ್ ತಾಳ್ಮೆಯ ಶತಕದಾಟ, ಮಾರ್ನಸ್ ಲಾಬುಶೇನ್ ಅರ್ಧಶತಕದ ಸಹಾಯದಿಂದ ಆಸ್ಟ್ರೇಲಿಯಾ ತಂಡವು ಕೊಹ್ಲಿ ಪಡೆಗೆ 287 ರನ್‍ಗಳ ಗುರಿ ನೀಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಭಾನುವಾರ ನಡೆಯುತ್ತಿರುವ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 131 ರನ್ (132ಎಸೆತ, 14 ಬೌಂಡರಿ, ಸಿಕ್ಸ್), ಮಾರ್ನಸ್ ಲಾಬುಶೇನ್ 54 ರನ್ (64 ಎಸೆತ, 5 ಬೌಂಡರಿ), ಅಲೆಕ್ಸ್ ಕ್ಯಾರಿ 35 ರನ್ (36 ಎಸೆತ, 5 ಬೌಂಡರಿ) ಸಹಾಯದಿಂದ 9 ವಿಕೆಟ್‍ಗಳ ನಷ್ಟಕ್ಕೆ 286 ರನ್‍ಗಳ ಸಾಧಾರಣ ಮೊತ್ತ ಪೇರಿಸಿದೆ.

ಈ ಬಾರಿಯೂ ಟಾಸ್ ಗೆದ್ದ ಆಸ್ಟ್ರೇಲಿಯಾ ಬೃಹತ್ ಮೊತ್ತದ ರನ್‍ಗಳ ಗುರಿ ನೀಡುವ ಉದ್ದೇಶದಿಂದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಆಸೀಸ್ ಪಡೆ ಆರಂಭದಲ್ಲಿ ಭಾರೀ ಪಜೀತಿಗೆ ಸಿಲುಕಿತು. ಇನ್ನಿಂಗ್ಸ್ ನ 4ನೇ ಓವರ್ ನಲ್ಲಿ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಜೊತೆಯಾಟ ಕಟ್ಟಲು ಮುದಾಗಿದ್ದ ಆ್ಯರನ್ ಫಿಂಚ್ ಹಾಗೂ ಸ್ಟೀವ್ ಸ್ಮೀತ್ ಜೋಡಿ ರನ್ ಕದಿಯಲು ಯತ್ನಿಸಿ ವಿಕೆಟ್ ಕಳೆದುಕೊಂಡಿತು. ಇನ್ನಿಂಗ್ಸ್ ನ 9ನೇ ಓವರ್‍ನ ಮೊಹಮ್ಮದ್ ಶಮಿ ಬೌಲಿಂಗ್ ವೇಳೆ ಫಿಂಚ್ ರನ್ ಔಟ್ ಆದರು. ಫಿಂಚ್ 19 ರನ್ (26 ಎಸೆತ, ಬೌಂಡರಿ, ಸಿಕ್ಸ್) ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ತೆರಳಿದರು.

ಜಡೇಜಾ ಕಮಾಲ್:
ವಿಕೆಟ್ ಕಾಯ್ದುಕೊಂಡು ನಿಧಾನಗತಿಯ ಆಟ ಮುಂದುವರಿಸಿದ ಸ್ಮಿತ್‍ಗೆ ಮಾರ್ನಸ್ ಲಾಬುಶೇನ್ ಸಾಥ್ ನೀಡಿದರು. ಈ ಜೋಡಿ ಉತ್ತಮ ಜೊತೆಯಾಟ ಕಟ್ಟುವಲ್ಲಿ ಯಶಸ್ವಿಯಾಯಿತು. ಸ್ಮಿತ್ ಹಾಗೂ ಲಾಬುಶೇನ್ ಜೋಡಿ 3ನೇ ವಿಕೆಟ್‍ಗೆ 128 ರನ್‍ಗಳ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು ಏರಿಸಿತು. ಇನ್ನಿಂಗ್ಸ್ ನ 32ನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ ಮಾರ್ನಸ್ ಲಾಬುಶೇನ್ ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದರು. ಮಾರ್ನಸ್ ಲಾಬುಶೇನ್ 54 ರನ್ (64 ಎಸೆತ, 5 ಬೌಂಡರಿ) ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಮಿಚೆಲ್ ಸ್ಟಾರ್ಕ್ ಗೆ ರನ್ ಗಳಿಸಲು ಅವಕಾಶ ನೀಡದೆ ಜಡೇಜಾ ವಿಕೆಟ್ ಕಿತ್ತಿದರು. ಈ ಒಂದೇ ಓವರ್ ನಲ್ಲಿ ಎರಡು ಪ್ರಮುಖ ವಿಕೆಟ್ ಪಡೆದಿದ್ದು ಪಂದ್ಯಕ್ಕೆ ಉತ್ತಮ ತಿರುವು ನೀಡಿತು.

ಐದನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಅಲೆಕ್ಸ್ ಕ್ಯಾರಿ ಸ್ಟೀವ್ ಸ್ಮಿತ್‍ಗೆ ಸಾಥ್ ನೀಡಿದರು. ಈ ಜೋಡಿ 5ನೇ ವಿಕೆಟ್‍ಗೆ 58 ರನ್‍ಗಳ ಜೊತೆಯಾಟದ ಕೊಡುಗೆ ನೀಡಿತು. ಇನ್ನಿಂಗ್ಸ್ ನ 42ನೇ ಓವರ್ ನಲ್ಲಿ ಕುಲದೀಪ್ ಯಾದವ್ ಅಲೆಕ್ಸ್ ಕ್ಯಾರಿ ವಿಕೆಟ್ ಪಡೆದರು. ಅಲೆಕ್ಸ್ ಕ್ಯಾರಿ 35 ರನ್ (36 ಎಸೆತ, 6 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು.

ಸ್ಮಿತ್ ಶತಕ:
63 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದ ಸ್ಟೀವ್ ಸ್ಮಿತ್ 118 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಅವರ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‍ನ ಒಂಬತ್ತನೇ ಶತಕವಾಗಿದೆ. ಆದರೆ ಸ್ಮಿತ್ ಶತಕ ಸಿಡಿಸಿದ ಇನ್ನಿಂಗ್ಸ್ ನ 44ನೇ ಓವರ್ ನಲ್ಲಿ ಭಾರತ ಯುವ ವೇಗಿ ನವದೀಪ್ ಸೈನಿ 4 ರನ್ ಗಳಿಸಿದ್ದ ಆಗಸ್ಟ್ ವಿಕೆಟ್ ಕಿತ್ತರು. ಆದರೆ ಸ್ಮಿತ್ ಭರ್ಜರಿ ಬ್ಯಾಟಿಂಗ್ ಆರಂಭಿಸಿದರು.

ಇನ್ನಿಂಗ್ಸ್ ನ 46ನೇ ಓವರ್ ನಲ್ಲಿ ಸ್ಮಿತ್ ಎರಡು ಬೌಂಡರಿ, ಒಂದು ಸಿಕ್ಸ್ ಸಿಡಿಸಿದರು. ಸೈನಿ ಎಸೆದ ಈ ಓವರ್ ನಲ್ಲಿ ಆಸೀಸ್ 16 ಗಳಿಸಿತು. ಆದರೆ ಸ್ಮಿತ್ ಅವರನ್ನು ಪೆವಿಲಿಯನ್‍ಗೆ ಅಟ್ಟುವಲ್ಲಿ ಮೊಹಮ್ಮದ್ ಶಮಿ ಸೈ ಎನಿಸಿಕೊಂಡರು. ಇನ್ನಿಂಗ್ಸ್ ನ 48ನೇ ಓವರ್ ನ ಮೊದಲ ಎಸೆತದಲ್ಲೇ ಸ್ಮಿತ್ ವಿಕೆಟ್ ಪಡೆದ ಶಮಿ, 4ನೇ ಎಸೆತದಲ್ಲಿ ಕಮ್ಮಿನ್ಸ್ ವಿಕೆಟ್ ಕಿತ್ತರು. ಬಳಿಕ ಮೈದಾಕ್ಕಿಳಿದ ಆಸೀಸ್ ಆಟಗಾರರು ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು.

ಅನುಭವಿ ಹಿರಿಯ ಆಟಗಾರ ಮೊಹಮ್ಮದ್ ಶಮಿ ಆಸೀಸ್ ತಂಡಕ್ಕೆ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಆಘಾತ ನೀಡಿದರು. 10 ಓವರ್ ಮಾಡಿದ ಶಮಿ 63 ರನ್ ನೀಡಿ 4  ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು. ಸ್ಪಿನ್ನರ್ ರವೀಂದ್ರ ಜಡೇಜಾ 10 ಓವರ್ ಬೌಲಿಂಗ್ ಮಾಡಿ ಎರಡು ವಿಕೆಟ್ ಪಡೆದರೆ, ನವದೀಪ್ ಸೈನಿ ಹಾಗೂ ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಆದರೆ ಯಾವುದೇ ವಿಕೆಟ್ ಪಡೆಯದ ಜಸ್‍ಪ್ರೀತ್ ಬುಮ್ರಾ 10 ಓವರ್ ಮಾಡಿ ಕೇವಲ 38 ರನ್ ನೀಡಿದ್ದಾರೆ.

ರನ್ ಏರಿದ್ದು ಹೇಗೆ?:
50 ರನ್- 54 ಎಸೆತ
100 ರನ್- 105 ಎಸೆತ
150 ರನ್- 159 ಎಸೆತ
200 ರನ್- 222 ಎಸೆತ
250 ರನ್- 272 ಎಸೆತ
286 ರನ್- 300 ಎಸೆತ

Comments

Leave a Reply

Your email address will not be published. Required fields are marked *