ಬಾಂಗ್ಲಾ ಸೋಲಿಸಿ ಸೆಮಿಗೆ ಟೀಂ ಇಂಡಿಯಾ ಯುವಪಡೆ ಎಂಟ್ರಿ

ಕ್ವೀನ್ಸ್ ಟೌನ್: ಗಣರಾಜ್ಯೋತ್ಸವ ಸಂಭ್ರಮದಲ್ಲಿರುವ ಭಾರತೀಯರಿಗೆ ಯಂಗ್ ಟೀಮ್ ಇಂಡಿಯಾ ಮತ್ತೊಂದು ಶುಭ ಸುದ್ದಿ ನೀಡಿದೆ.

ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‍ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 131 ರನ್‍ಗಳ ಅಂತರದಿಂದ ಜಯ ಸಾಧಿಸಿರುವ ಭಾರತ ಸೆಮಿ ಫೈನಲ್ ಹೋರಾಟಕ್ಕೆ ಪ್ರವೇಶ ಪಡೆದಿದೆ.

ಕ್ವೀನ್ಸ್ ಟೌನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 49.2 ಓವರ್‍ಗಳಲ್ಲಿ 265 ರನ್ ಗಳಿಗೆ ಆಲೌಟ್ ಆಯಿತು. ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಭಾರತದ ಅಗ್ರ ಕ್ರಮಾಂಕದ ಆಟಗಾರರು ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲರಾದರು.

ನಾಯಕ ಪೃಥ್ವಿ ಶಾ 40 ರನ್ ಗಳಿಸಿ ನಿರ್ಗಮಿಸಿದರು. ಮಧ್ಯಮ ಕ್ರಮಾಂಕದಲ್ಲಿ ಉಪ ನಾಯಕ ಶುಭ್‍ಮನ್ ಗಿಲ್(86 ರನ್, 94 ಎಸೆತ) ಹಾಗೂ ವಿಕೆಟ್‍ಕೀಪರ್-ಬ್ಯಾಟ್ಸ್ ಮನ್ ಹಾರ್ವಿಕ್ ದೇಸಾಯಿ(34 ರನ್ 48 ಎಸೆತ) 4ನೇ ವಿಕೆಟ್‍ಗೆ 74 ರನ್ ಜೊತೆಯಾಟದಲ್ಲಿ ಭಾಗಿಯಾಗಿ ತಂಡವನ್ನು ಆಧರಿಸಿದರು. ಕೊನೆಯಲ್ಲಿ ಆಲ್‍ರೌಂಡರ್ ಅಭಿಷೇಕ್ ಶರ್ಮ 49 ಎಸೆತಗಳಲ್ಲಿ 50 ರನ್ ಗಳಿಸಿ, ಭಾರತ ತಂಡ 250 ರನ್ ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಸೆಮಿಫೈನಲ್ ಪ್ರವೇಶಕ್ಕೆ ಸವಾಲಿನ ಮೊತ್ತದ ಗುರಿ ಪಡೆದಿದ್ದ ಬಾಂಗ್ಲಾದೇಶ ತಂಡ ಕಮಲೇಶ್ ನಾಗರ್‍ಕೋಟಿ (3-18) ದಾಳಿಗೆ ತತ್ತರಿಸಿ 42.1 ಓವರ್‍ಗಳಲ್ಲಿ 134 ರನ್‍ಗೆ ಆಲೌಟಾಯಿತು. ಪಿನಾಕ್ ಘೋಷ್ ಗಳಿಸಿದ 43 ರನ್ ಬಾಂಗ್ಲಾ ಪಾಲಿಗೆ ಸರ್ವಾಧಿಕ ಸ್ಕೋರ್ ಆಗಿತ್ತು. 40 ಎಸೆತಗಳನ್ನು ಎದುರಿಸಿದ ಆಸಿಫ್ ಹುಸೇನ್ 18 ರನ್ ಗಳಿಸಿದರು.

ಜನವರಿ 30ರಂದು ಕ್ರೈಸ್ಟ್ ಚರ್ಚ್ ನಲ್ಲಿ ನಡೆಯಲಿರುವ ಸೆಮಿ ಫೈನಲ್‍ನಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಪಾಕ್ ತಂಡ ಕ್ವಾರ್ಟರ್ ಫೈನಲ್‍ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿತ್ತು.

ಇನ್ನೊಂದು ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಅಫ್ಘಾನಿಸ್ತಾನದ ಸವಾಲನ್ನು ಎದುರಿಸಲಿದೆ. ನಿನ್ನೆ ನಡೆದ ಕ್ವಾರ್ಟರ್ ಫೈನಲ್‍ನಲ್ಲಿ ಅಫ್ಘಾನಿಸ್ತಾನ, ನ್ಯೂಜಿಲೆಂಡ್ ತಂಡವನ್ನು 202 ರನ್ ಗಳಿಂದ ಭರ್ಜರಿಯಾಗಿ ಮಣಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಅಫ್ಘಾನಿಸ್ತಾನ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 309 ರನ್ ಗಳಿಸಿತ್ತು. ಬಳಿಕ ನ್ಯೂಜಿಲೆಂಡ್ ತಂಡವನ್ನು 28.1 ಓವರ್‍ಗಳಲ್ಲಿ ಕೇವಲ 107 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು.

Comments

Leave a Reply

Your email address will not be published. Required fields are marked *