ಪಾಕಿಗಳು ನಮ್ಮ ರಕ್ತ ಹರಿಸ್ತಾರೆ, ನಾವೇಕೆ ನೀರು ಕೊಡಬೇಕು: ಕೇಂದ್ರ ಸಚಿವ

ನವದೆಹಲಿ: ಪಾಕಿಸ್ತಾನಿಯರು ನಮ್ಮ ರಕ್ತ ಹರಿಸುತ್ತಾರೆ. ಅಂತವರಿಗೆ ನಾವೇಕೆ ನೀರು ಕೊಡಬೇಕು ಎಂದು ಕೇಂದ್ರ ಸಚಿವ ಅರ್ಜುನ್ ಮೇಘ್ವಾಲ್ ಕಿಡಿಕಾರಿದ್ದಾರೆ.

ನಮ್ಮ ದೇಶಕ್ಕೆ ಸಂಬಂಧಿಸಿದ ನೀರು ಪಾಕಿಸ್ತಾನಕ್ಕೆ ಹೋಗದಂತೆ ತಡೆದು ಸಂಗ್ರಹಿಸಬೇಕು. ಈ ಮೂಲಕ ಸಿಂಧೂ ನದಿ ನೀರಿನ ಒಪ್ಪಂದವನ್ನು ಕೈಬಿಟ್ಟು, 5.3 ಲಕ್ಷ (0.53 ಮಿಲಿಯನ್) ಎಕರೆ ಅಡಿ ನೀರು ತಡೆಯುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದರು.

ಪಾಕಿಸ್ತಾನಕ್ಕೆ ಹೋಗುವ ನೀರನ್ನು ತಡೆದರೆ ಪಂಜಾಬ್ ಹಾಗೂ ರಾಜಸ್ಥಾನದ ಜನರಿಗೆ ಕುಡಿಯಲು ಪೂರೈಕೆ ಮಾಡಬಹುದು. ಇಲ್ಲವೇ ಕೃಷಿಗೆ ಬಳಕೆ ಮಾಡಿಕೊಳ್ಳಬಹುದು. ಸಂಗ್ರಹಿಸಿಟ್ಟ ನೀರಿನಿಂದ ಹೆಚ್ಚಿನ ಉಪಯೋಗವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪಾಕ್‍ಗೆ ಪೂರೈಕೆಯಾಗುವ ನೀರನ್ನು ತಡೆಯುವ ಕ್ರಮಕೈಗೊಳ್ಳಲಿದೆ ಎಂದರು.

ಪುಲ್ವಾಮಾ ದಾಳಿಯ ಬಳಿಕ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರು ಕೂಡ ಪಾಕಿಸ್ತಾನಕ್ಕೆ ಹೋಗುವ ನೀರನ್ನು ತಡೆಯುವ ಎಚ್ಚರಿಕೆ ನೀಡಿದ್ದರು. ಉತ್ತರ ಪ್ರದೇಶದ ಭಾಗ್ಪತ್‍ನಲ್ಲಿ ಮಾತನಾಡಿದ್ದ ಅವರು, ಪುಲ್ವಾಮಾ ಉಗ್ರರ ದಾಳಿ ಬಳಿಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ನಿಲ್ಲಿಸದಿದ್ದರೆ 1960ರ ಭಾರತ-ಪಾಕಿಸ್ತಾನ ನಡುವಿನ ಸಿಂಧೂ ನದಿ ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸಬೇಕಾಗುತ್ತದೆ ಎಂದು ಗುಡುಗಿದ್ದರು.

ಭಾರತದ ಮೂರು ನದಿಗಳ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದೆ. ನ್ಯಾಯಸಮ್ಮತವಾಗಿ ನಮಗೆ ಸಿಗುತ್ತಿದ್ದ ನೀರು ಪಾಕ್ ಪಾಲಾಗುತ್ತಿದೆ. ಈ ಹಿನ್ನೆಲೆ ಆ ಮೂರು ನದಿಗಳ ನೀರು ಯಮುನಾಗೆ ಹರಿಯುವಂತೆ ಯೋಜನೆಯೊಂದನ್ನು ಪರಿಕಲ್ಪನೆ ಮಾಡಲಾಗಿದೆ. ಇದು ರೆಡಿಯಾದ ಬಳಿಕ ಯಮುನಾ ನದಿಯಲ್ಲಿ ಸಾಕಷ್ಟು ನೀರಿರುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.

ಈಗಾಗಲೇ ಯಮುನಾ ನದಿಯ ಪುನಶ್ಚೇತನಕ್ಕೆ ಹಲವು ಯೋಜನೆಗಳನ್ನು ಆರಂಭಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಮೂರು ನದಿಗಳು ಭಾರತಕ್ಕೆ, ಮೂರು ನದಿಗಳನ್ನು ಪಾಕಿಸ್ತಾನಕ್ಕೆ ನೀಡಲಾಯಿತು. ಆದರೆ ಭಾರತ ಉದಾರ ಮನಸ್ಸಿನಿಂದ ನಿರಂತರವಾಗಿ ಪಾಕಿಸ್ತಾನಕ್ಕೆ ನೀರನ್ನು ನೀಡುತ್ತಲೇ ಇದೆ. ಆದರೆ ಈಗ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಸಂಗ್ರಹಿಸಿ ನೀರಾವರಿ ಯೋಜನೆಯ ಮೂಲಕ ಜಮ್ಮು ಕಾಶ್ಮೀರ ಮತ್ತು ಪಂಜಾಬ್‍ಗೆ ನೀಡಲು ಮುಂದಾಗಿದ್ದೇವೆ ಎಂದು ಗಡ್ಕರಿ ತಿಳಿಸಿದ್ದರು.

ಈಗಾಗಲೇ ಪಂಜಾಬಿನ ಪಠಾಣ್‍ಕೋಟ್ ಜಿಲ್ಲೆಯ ಶಾಪಕುರ್ಕಿಂಡಿಯಲ್ಲಿ ರವಿ ನದಿಗೆ ಅಡ್ಡಲಾಗಿ ಸರ್ಕಾರ ಜಲಾಶಯವನ್ನು ನಿರ್ಮಾಣ ಮಾಡುತ್ತಿದೆ. ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಈ ಜಲಾಶಯದಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ರವಿ ನದಿ ವ್ಯಾಪ್ತಿಯ ರಾಜ್ಯಗಳಿಗೆ ಈ ನೀರನ್ನು ಹರಿಸಲಾಗುತ್ತದೆ. ಈ ಯೋಜನೆಗಳು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸಲ್ಪಟ್ಟಿವೆ. 2016ರಲ್ಲಿ ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆದ ಬಳಿಕ ಸರ್ಕಾರ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಭಾರತದತ್ತ ತಿರುಗಿಸಲು ಯೋಜನೆ ರೂಪಿಸಿತ್ತು. ಇಂಡಸ್ ನದಿ ನೀರಿನ ಒಪ್ಪಂದದ ಪ್ರಕಾರ ರಾವಿ, ಸಟ್ಲೇಜ್, ಬೀಯಾಸ್ ನದಿ ನೀರಿನ ಬಳಕೆ ಭಾರತಕ್ಕೆ ಮೀಸಲಾಗಿದ್ದರೆ, ಜೇಲಂ, ಚೀನಾಬ್ ಮತ್ತು ಇಂಡಸ್ ನದಿ ನೀರು ಪಾಕಿಸ್ತಾನಕ್ಕೆ ಹಂಚಿಕೆಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *