ಕಿವೀಸ್‍ನಲ್ಲಿ ಟೀಂ ಇಂಡಿಯಾಗೆ ಅಗ್ನಿ ಪರೀಕ್ಷೆ

ಆಕ್ಲೆಂಡ್: ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಆಸೀಸ್ ಸರಣಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಸದ್ಯ ನ್ಯೂಜಿಲೆಂಡ್ ಸವಾಲು ಎದುರಿಸಲು ಸಿದ್ಧತೆ ನಡೆಸಿದೆ.

ನ್ಯೂಜಿಲೆಂಡ್ ವಿರುದ್ಧ 5 ಏಕದಿನ ಪಂದ್ಯಗಳ ಟೂರ್ನಿ ಬುಧವಾರದಿಂದ ಆರಂಭವಾಲಿದ್ದು, ಟೀಂ ಇಂಡಿಯಾ ನೇರ ಆಸ್ಟ್ರೇಲಿಯಾದಿಂದ ಕಿವೀಸ್‍ಗೆ ಸೋಮವಾರ ಬಂದಿಳಿದಿದೆ. ಏಕದಿನ ಸರಣಿಯ ಬಳಿಕ 3 ಪಂದ್ಯಗಳ ಟಿ20 ಸರಣಿ ಫೆಬ್ರವರಿ 6ರಿಂದ ಆರಂಭವಾಗಲಿದೆ.

ಟೀಂ ಇಂಡಿಯಾ ತಂಡದಲ್ಲಿ ಆರಂಭಿಕರಾದ ಧವನ್, ರೋಹಿತ್ ಶರ್ಮಾ ಸೇರಿದಂತೆ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಶಕ್ತಿ ತುಂಬಲಿದ್ದಾರೆ. ಇದರೊಂದಿಗೆ ಮಾಜಿ ನಾಯಕ ಎಂಎಸ್ ಧೋನಿ ಆಸೀಸ್ ಸರಣಿಯಲ್ಲಿ ಬ್ಯಾಟಿಂಗ್ ಫಾರ್ಮ್‍ಗೆ ಮರಳಿರುವುದು ತಂಡದ ಆತ್ಮಸ್ಥೈರ್ಯ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.

ಕಿವೀಸ್ ಸವಾಲು: ನ್ಯೂಜಿಲೆಂಡ್ ತಂಡ ಇತ್ತೀಚೆಗೆ ಆಡಿದ ಶ್ರೀಲಂಕಾ ಟೂರ್ನಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಅಲ್ಲದೇ ಕಳೆದ 19 ಏಕದಿನ ಪಂದ್ಯಗಳಲ್ಲಿ 14 ಜಯಗಳಿಸಿದ್ದರೆ, 4ರಲ್ಲಿ ಮಾತ್ರ ಸೋಲುಂಡಿದೆ. ಒಂದು ಪಂದ್ಯ ರದ್ದಾಗಿದೆ. ಇತ್ತ ಆಸ್ಟ್ರೇಲಿಯಾ ತಂಡದ ಒಳಗಿನ ಗೊಂದಲಗಳು ತಂಡದ ಪ್ರದರ್ಶನದ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡಿತ್ತು. ಆದರೆ ಕಿವೀಸ್ ತಂಡ ಬಲಿಷ್ಠವಾಗಿದ್ದು, ಕೊಹ್ಲಿ ನಾಯಕತ್ವದ ಯುವ ಪಡೆ ಕಠಿಣ ಸವಾಲು ಎದುರಿಸಬೇಕಿದೆ.

2014 ರಲ್ಲಿ ಕಿವೀಸ್ ಪ್ರವಾಸ ಮಾಡಿದ್ದ ಟೀ ಇಂಡಿಯಾ ಏಕದಿನ ಸರಣಿಯಲ್ಲಿ 0-4 ಅಂತರದಿಂದ ಸೋಲು ಕಂಡಿತ್ತು. ಸರಣಿಯಲ್ಲಿ 1 ಪಂದ್ಯ ಮಾತ್ರ ಟೈ ಆಗಿತ್ತು. ಅಲ್ಲದೇ ಕೀವಿಸ್ ನೆಲದಲ್ಲಿ 35 ಏಕದಿನ ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ ಕೇವಲ 10 ಪಂದ್ಯಗಳಲ್ಲಿ ಗೆಲುವು ಕಂಡಿದೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಿವೀಸ್ ಆಟಗಾರರ ಬಗ್ಗೆ ಎಚ್ಚರಿಕೆ ಮನೋಭಾವ ಹೊಂದಿದ್ದು, ಕಳೆದ ಕೆಲ ವರ್ಷಗಳಿಂದ ಕಿವೀಸ್ ಸ್ಥಿರ ಪ್ರದರ್ಶನವನ್ನು ನೀಡುತ್ತಿದ್ದು, ಪಂದ್ಯ ಸ್ಪರ್ಧಾತ್ಮಕವಾಗಿರಲಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.

ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದು ಪ್ರಮುಖ ಹಿನ್ನಡೆಯಾಗಿದ್ದು, ಕಳೆದ 9 ಪಂದ್ಯಗಳಲ್ಲಿ ಧವನ್ ಕೇವಲ 35 ರನ್ ಮಾತ್ರ ಸಿಡಿಸಿದ್ದಾರೆ. ಅಲ್ಲದೇ ಹಾರ್ದಿಕ್ ಪಾಂಡ್ಯ ಅಮಾನತಿನಲ್ಲಿರುವುದು ಕೂಡ ತಂಡಕ್ಕೆ ಸಮಸ್ಯೆ ಆಗಿದೆ. ಇತ್ತ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿಗೆ ಯುವ ಬೌಲರ್ ಗಳಾದ ಮೊಹಮ್ಮದ್ ಸಿರಾಜ್ ಅಥವಾ ಖಲೀಲ್ ಅಹ್ಮದ್ ಸಾಥ್ ನೀಡಲಿದ್ದಾರೆ.

ಇತ್ತ ಕಿವೀಸ್ ತಂಡ ಬಲಿಷ್ಠ ಆರಂಭಿಕರನ್ನು ಹೊಂದಿದ್ದು, ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಬೌಲಿಂಗ್ ನಲ್ಲಿಯೂ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಲಾಕೀ ಫೆರ್ಗುಸೊನ್ ಉತ್ತಮ ಲಯದಲ್ಲಿದ್ದಾರೆ.

ಇತ್ತಂಡಗಳು ಇಂತಿದೆ:
ಇಂಡಿಯಾ : ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಂಬಾಟಿ ರಾಯುಡು, ದಿನೇಶ್ ಕಾರ್ತಿಕ್, ಶಿಖರ್ ಧವನ್, ಎಂಎಸ್ ಧೋನಿ, ಕೇದರ್ ಜಾಧವ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಖಲೀಲ್ ಅಹ್ಮದ್, ರವೀಂದ್ರ ಜಡೇಜಾ, ವಿಜಯ್ ಶಂಕರ್, ಸುಭ ಮನ್ ಗಿಲ್.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್(ನಾಯಕ), ರಾಸ್ ಟೇಲರ್, ಟಾಮ್ ಲ್ಯಾಥಂ, ಮಾರ್ಟಿನ್ ಗುಪ್ಟಿಲ್, ಮ್ಯಾಟ್ ಹೆನ್ರಿ, ಕಾಲಿನ್ ಮನ್ರೊ, ಹೆನ್ರಿ ನಿಕೋಲಸ್, ಮಿಚೆಲ್ ಸ್ಯಾಂಟ್ನಾರ್, ಇಶ್ ಸೋಧಿ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರಾಂಡ್ಹೋಮ್, ಡೌಗ್ ಬ್ರೇಸ್ವೆಲ್, ಲಾಕೀ ಫೆರ್ಗುಸೊನ್.

ಏಕದಿನ ಪಂದ್ಯಗಳು ಭಾರತೀಯ ಕಾಲಮಾನ ಬೆಳಗ್ಗೆ 7.30ಕ್ಕೆ ಆರಮಭವಾದರೆ, ಟಿ20 ಪಂದ್ಯಗಳು ಮಧ್ಯಾಹ್ನ 12.30 ರಿಂದ ಆರಂಭವಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *