ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಬ್ರೇಕ್‌ – ಪಾಕಿಸ್ತಾನಕ್ಕೆ ಅಧಿಕೃತ ರಾಜತಾಂತ್ರಿಕ ಟಿಪ್ಪಣಿ ಕಳುಹಿಸಿದ ಭಾರತ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪಹಲ್ಗಾಮ್‌ನಲ್ಲಿ ನಡೆದ ಪೈಶಾಚಿಕ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಹಿಟ್ಟಿರುವ ಭಾರತ ಈಗಾಗಲೇ ಪಾಕ್‌ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದೆ. ಇಂದು ಸರ್ವಪಕ್ಷ ಸಭೆಯ ಬಳಿಕ 1960ರಲ್ಲಿ ವಿಶ್ವಬ್ಯಾಂಕ್‌ ಮಧ್ಯಸ್ಥಿಕೆಯಲ್ಲಿ ನಡೆದ ಸಿಂಧೂ ನದಿ ಒಪ್ಪಂದ ಸ್ಥಗಿತಗೊಳಿಸುವ ಕುರಿತು ಭಾರತ, ಪಾಕಿಸ್ತಾನಕ್ಕೆ ಅಧಿಕೃತವಾಗಿ ಹೇಳಿದೆ.

ಇಂದು ರಾಜನಾಥ್‌ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯ ಬಳಿಕ ಭಾರತ, ಪಾಕಿಸ್ತಾನಕ್ಕೆ ಔಪಚಾರಿಕ ರಾಜತಾಂತ್ರಿಕ ಟಿಪ್ಪಣಿಯನ್ನು ಕಳುಹಿಸಲಾಗಿದೆ ಎಂದು ಉನ್ನತಮೂಲಗಳು ತಿಳಿಸಿವೆ. ಜಲ ಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬಶ್ರೀ ಮುಖರ್ಜಿ ಅವರು ಪಾಕಿಸ್ತಾನ ಜಲ ಸಂಪನ್ಮೂಲ ಸಚಿವಾಲಯದ ಪಾಕ್‌ ಸಚಿವ ಸೈಯದ್ ಅಲಿ ಮುರ್ತಾಜಾ ಅವರಿಗೆ ಪತ್ರ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವು ಭಾರತ ಮತ್ತು ಪಾಕಿಸ್ತಾನದ ನಡುವಿನ ಒಂದು ಪ್ರಮುಖ ಒಪ್ಪಂದವಾಗಿದೆ. ಈ ಒಪ್ಪಂದವು ಎರಡೂ ದೇಶಗಳ ನಡುವೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಸಹಾಯ ಮಾಡಿದೆ. ಈ ಒಪ್ಪಂದದ ಬಗ್ಗೆ ಯಾವುದೇ ಸಮಸ್ಯೆಗಳಿದ್ದರೆ, ಎರಡೂ ದೇಶಗಳು ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳಬೇಕು. ವಿಶ್ವ ಬ್ಯಾಂಕ್ ಕೂಡ ಈ ವಿಷಯದಲ್ಲಿ ಸಹಾಯ ಮಾಡಬಹುದು.

ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದಿದ್ದ ಕೇಂದ್ರ ಸಂಪುಟ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಅಟ್ಟಾರಿ-ವಾಘಾ ಗಡಿ ಚೆಕ್‌ಪೋಸ್ಟ್‌ (Attari Border) ಅನ್ನು ತಕ್ಷಣದಿಂದ ಮುಚ್ಚುವುದು, ಸಾರ್ಕ್ ವಿಸಾ ವಿನಾಯಿತಿ ಯೋಜನೆ ಪಾಕಿಸ್ತಾನದವರಿಗೆ ರದ್ದು, ರಾಯಭಾರ ಕಚೇರಿ ಸಿಬ್ಬಂದಿ ಹಂತಹಂತವಾಗಿ ಕಡಿತಗೊಳಿಸುವುದು ಮತ್ತು 1960ರ ಸಿಂಧು ನದಿ ಒಪ್ಪಂದವನ್ನು ರದ್ದು ಮಾಡುವುದು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೇಂದ್ರ ಸಂಪುಟ ಸಮಿತಿ ತೆಗೆದುಕೊಂಡಿತ್ತು.

ಪ್ರಮುಖ ನಿರ್ಣಯಗಳೇನು?
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ 1960ರ ಸೆಪ್ಟೆಂಬರ್‌ 19ರಂದು ಸಹಿ ಹಾಕಲಾಗಿದ್ದ ಸಿಂಧೂ ನದಿ ನೀರು ಒಪ್ಪಂದವನ್ನು ತಡೆಹಿಡಿದಿದೆ. ಇದರೊಂದಿಗೆ ಪಾಕಿಸ್ತಾನಕ್ಕೆ ನೀರು ಸರಬರಾಜು ಮಾಡುತ್ತಿದ್ದ ಸಿಂಧೂ ನದಿ ಮತ್ತು ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲೇಜ್‌ ನದಿಗಳಿಂದ ನೀರು ಸರಬರಾಜು ನಿಲ್ಲಿಸುವ ತೀರ್ಮಾನಕ್ಕೆ ಬರಲಾಗಿದೆ. ಜೊತೆಗೆ ಅಟ್ಟಾರಿ-ವಾಘಾ ಗಡಿ ಮುಚ್ಚಲು ಭಾರತ ತೀರ್ಮಾನಿಸಿದೆ.

ಅಷ್ಟೇ ಅಲ್ಲದೇ ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES) ವೀಸಾಗಳ ಅಡಿಯಲ್ಲಿ ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಪ್ರಯಾಣಿಸಲು ನೀಡಿದ ಅನುಮತಿಯನ್ನು ತಡೆಹಿಡಿಯಲಾಗುತ್ತಿದೆ. ಈ ಹಿಂದೆ ನೀಡಿದ್ದ ಯಾವುದೇ SVES ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗುತ್ತದೆ. ಈ ವೀಸಾ ಅಡಿಯಲ್ಲಿ ಭಾರತದಲ್ಲಿರುವ ಯಾವುದೇ ಪಾಕಿಸ್ತಾನಿ ಪ್ರಜೆ 48 ಗಂಟೆಯೊಳಗೆ ಭಾರತ ತೊರೆಯಬೇಕೆಂದು ಹೇಳಿದೆ. ಜೊತೆಗೆ ನವದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌, ರಕ್ಷಣಾ/ಮಿಲಿಟರಿ, ನೌಕಾ ಮತ್ತು ವಾಯು ಸಲಹೆಗಾರರನ್ನು ಹಂತಹಂತವಾಗಿ ಭಾರತದಿಂದ ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ.