ಬಾಂಗ್ಲಾ ಬಗ್ಗು ಬಡಿದು ಅಜೇಯವಾಗಿ ಫೈನಲ್‌ ಪ್ರವೇಶಿಸಿದ ಭಾರತ

– ಹಲವು ಕ್ಯಾಚ್‌ ಡ್ರಾಪ್‌ ಮಾಡಿದ್ದ ಟೀಂ ಇಂಡಿಯಾ

ದುಬೈ: ಏಷ್ಯಾ ಕಪ್‌ (Asia Cup) ಸೂಪರ್‌ 4 ಪಂದ್ಯದಲ್ಲಿ ಬಾಂಗ್ಲಾದೇಶ (Bangladesh) ವಿರುದ್ಧ 41 ರನ್‌ಗಳ ಜಯ ಸಾಧಿಸಿದ ಭಾರತ (India) ಅಜೇಯವಾಗಿ ಫೈನಲ್‌ ಪ್ರವೇಶಿಸಿದೆ.

ಗೆಲುವಿಗೆ 168 ರನ್‌ಗಳ ಗುರಿಯನ್ನು ಪಡೆದ ಬಾಂಗ್ಲಾ 19.3 ಓವರ್‌ಗಳಲ್ಲಿ 127 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಗುರುವಾರ ಪಾಕಿಸ್ತಾನ ಮತ್ತು ಬಾಂಗ್ಲಾ ನಡುವೆ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಜಯಗಳಿಸಿದವರು ಫೈನಲ್‌ ಪ್ರವೇಶಿಸಲಿದ್ದಾರೆ.

ಬಾಂಗ್ಲಾ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತು. ಬುಮ್ರಾ ತಮ್ಮ ಮೊದಲ ಓವರಿನ ಎರಡನೇ ಎಸೆತದಲ್ಲಿ ತಾಂಜಿದ್ ಹಸನ್ ಅವರನ್ನು ಔಟ್‌ ಮಾಡಿದರು.

ಪರ್ವೇಜ್ ಹೊಸೇನ್ ಎಮನ್ 21 ರನ್‌ ಗಳಿಸಿ ಔಟಾದರು. ಒಂದು ಕಡೆ ವಿಕೆಟ್‌ ಪತನಗೊಳ್ಳುತ್ತಿದ್ದರೂ ಆರಂಭಿಕ ಆಟಗಾರ ಸೈಫ್‌ ಹಸನ್‌ ಮುನ್ನುಗ್ಗಿ ಹೊಡೆಯುತ್ತಿದ್ದರು. ಅಕ್ಷರ್‌ ಪಟೇಲ್‌, ಶಿವಂ ದುಬೆ ಮತ್ತು ಕೀಪರ್‌ ಸಂಜು ಸ್ಯಾಮ್ಸನ್‌, ಅಭಿಷೇಕ್‌ ಶರ್ಮಾ ಕ್ಯಾಚ್‌ ಡ್ರಾಪ್‌ ಮಾಡಿದರು. ಕೊನೆಗೆ 69 ರನ್‌(61 ಎಸೆತ, 3 ಬೌಂಡರಿ, 5 ಸಿಕ್ಸ್‌) ಬುಮ್ರಾ ಬೌಲಿಂಗ್‌ನಲ್ಲಿ ಸಿಕ್ಸ್‌ ಸಿಡಿಸಲು ಹೋದರು. ಆದರೆ ಬೌಂಡರಿ ಗೆರೆಯ ಬಳಿ ಅಕ್ಷರ್‌ ಪಟೇಲ್‌ ಉತ್ತಮ ಕ್ಯಾಚ್‌ ಹಿಡಿದಿದ್ದರಿಂದ ಔಟಾದರು.

ಬಾಂಗ್ಲಾ ಉಳಿದ ಆಟಗಾರರಿಂದ ಉತ್ತಮ ಪ್ರತಿರೋಧ ವ್ಯಕ್ತವಾಗದ ಕಾರಣ ಪಂದ್ಯವನ್ನು ಸೋತಿತು. ಈ ಪಂದ್ಯದಲ್ಲಿ ಭಾರತ ಫೀಲ್ಡಿಂಗ್‌ ಕಳಪೆಯಾಗಿತ್ತು. ಹಲವು ಕ್ಯಾಚ್‌ಗಳನ್ನು ಆಟಗಾರರು ಕೈ ಚೆಲ್ಲಿದ್ದರು.

ಕುಲದೀಪ್‌ ಯಾದವ್‌ 3 ವಿಕೆಟ್‌ಪಡೆದರೆ ಬುಮ್ರಾ, ವರುಣ್‌ ಚಕ್ರವರ್ತಿ ತಲಾ 2 ವಿಕೆಟ್‌, ಅಕ್ಷರ್‌ ಪಟೇಲ್‌ ಮತ್ತು ತಿಲಕ್‌ ವರ್ಮಾ ತಲಾ 1 ವಿಕೆಟ್‌ ಪಡೆದರು.

ಶರ್ಮಾ ಸ್ಫೋಟಕ ಫಿಫ್ಟಿ:
ಇದಕ್ಕೂ ಮೊದಲು ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ಅಭಿಷೇಕ್‌ ಶರ್ಮಾ (Abhishek Sharma) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 168 ರನ್‌ ಗಳಿಸಿತ್ತು. ಭಾರತದ ಆರಂಭ ಉತ್ತಮವಾಗಿತ್ತು. ನಾಯಕ ಗಿಲ್‌ ಮತ್ತು ಅಭಿಷೇಕ್‌ ಶರ್ಮಾ 38 ಎಸೆತಗಳಲ್ಲಿ 77 ರನ್‌ ಜೊತೆಯಾಟವಾಡಿದರು. ಗಿಲ್‌ 29 ರನ್‌(19 ಎಸೆತ, 2 ಬೌಂಡರಿ, 1 ಸಿಕ್ಸ್‌) ಸಿಡಿಸಿ ಔಟಾದರು.

ಗಿಲ್‌ ಔಟಾದ ಬೆನ್ನಲ್ಲೇ ಶಿವಂ ದುಬೆ 2 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಎರಡು ವಿಕೆಟ್‌ ಪತನಗೊಂಡರೂ ಮತ್ತೊಂದು ಕಡೆ ಅಭಿಷೇಕ್‌ ಶರ್ಮಾ ಸ್ಫೋಟಕ ಬ್ಯಾಟ್‌ ಬೀಸಿದರು. ಸಿಕ್ಸರ್‌ ಬೌಂಡರಿ ಸಿಡಿಸಿದ ಅಭಿಷೇಕ್‌ ಶರ್ಮಾ 75 ರನ್‌( 37 ಎಸೆತ, 6 ಬೌಂಡರಿ, 5 ಸಿಕ್ಸರ್‌) ರನೌಟ್‌ ಆದರು.


ಅಭಿಷೇಕ್‌ ಶರ್ಮಾ ಔಟಾದ ಬೆನ್ನಲ್ಲೇ ಸೂರ್ಯಕುಮಾರ್‌ ಯಾದವ್‌ 5ರನ್‌, ತಿಲಕ್‌ ವರ್ಮಾ 5 ರನ್‌ ಗಳಿಸಿದರು. ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ ಮತ್ತು ಅಕ್ಷರ್‌ ಪಟೇಲ್‌ 34 ಎಸೆತಗಳಲ್ಲಿ 39 ರನ್‌ ಹೊಡೆದರು. ಪಾಂಡ್ಯ 38 ರನ್‌(29 ಎಸೆತ, 4 ಬೌಂಡರಿ, 1 ಸಿಕ್ಸ್‌) ಹೊಡೆದು ಔಟಾದರೆ ಅಕ್ಷರ್‌ ಪಟೇಲ್‌ ಔಟಾಗದೇ 10 ರನ್‌ ಹೊಡೆದರು.