ಭಾರತದಲ್ಲಿ ಕೊರೊನಾ ಯಾವ ಪ್ರಮಾಣದಲ್ಲಿ ಹರಡುತ್ತಿದೆ?- ಇಲ್ಲಿದೆ ಸಂಪೂರ್ಣ ವಿವರ

-ವಾರದಿಂದ ವಾರಕ್ಕೆ ಏರಿಕೆಯಾದ ಪ್ರಮಾಣ ಎಷ್ಟು?
-ಇತರೆ ರಾಷ್ಟ್ರಗಳಿಗಿಂತ ಭಾರತ ಸುರಕ್ಷಿತವಾಗಿದೆಯಾ?

ಬೆಂಗಳೂರು: ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ ಈ ಏರಿಕೆ ಪ್ರಮಾಣ ಜಗತ್ತಿನ ಇತರೆ ರಾಷ್ಟ್ರಗಳಿಗೆ ಹೋಲಿಸಿದಾಗ ತುಂಬಾ ಕಡಿಮೆ.

ಇನ್‍ಸ್ಟಿಟ್ಯೂಟ್ ಆಫ್ ಮೆಥೆಮಟಿಕಲ್ ಸೈನ್ಸ್ ನ ಚೆನ್ನೈ ವಿಜ್ಞಾನಿ ಸಿತಾಭ್ರಾ ಸಿನ್ಹಾ ಪ್ರಕಾರ, ಮಾರ್ಚ್ 19ರ ವೇಳೆ ಭಾರತದಲ್ಲಿ ಕೊರೊನಾ ಪಾಸಿಟಿವ್ ರೋಗಿಯಿಂದ ಸೋಂಕು ಸರಾಸರಿ 1.7 ಜನರಿಗೆ ಹರಡುತ್ತಿತ್ತು. ಮಾರ್ಚ್ 26ಕ್ಕೆ ಈ ಸರಾಸರಿ 1.81ಕ್ಕೆ ಏರಿಕೆ ಕಂಡಿತ್ತು. ಈ ಸರಾಸರಿ ಪ್ರಮಾಣ ಇರಾನ್, ಇಟಲಿ ದೇಶಕ್ಕಿಂತ ಕಡಿಮೆ.

ದಿ ಲಾನ್ಸೆಟ್ ಅಧ್ಯಯನ, ಕೋವಿಡ್-19 ಸೋಂಕಿನ ಪ್ರಸರಣದ ಪ್ರಮಾಣ ಒಂದು ಪ್ರಕರಣದಿಂದ ಇಬ್ಬರಿಂದ ಮೂವರಿಗೆ ಹರಡಬಹುದು ಎಂದು ಅಂದಾಜಿಸಿದೆ. ಮಾರ್ಚ್ ತಿಂಗಳಾಂತ್ಯಕ್ಕೆ ಸೋಂಕಿತರ ಸಂಖ್ಯೆ 1,500 ಇದೆ ಎಂಬುವುದು ಸಿನ್ಹಾ ಅವರ ಲೆಕ್ಕಾಚಾರ.

ಮಾರ್ಚ್ 26ರಂದು ಮಾತನಾಡಿದ್ದ ಸಿನ್ಹಾ, ಏಪ್ರಿಲ್ 5ರೊಳಗೆ ಸೋಂಕಿತರ ಸಂಖ್ಯೆ 3 ಸಾವಿರ ತಲುಪಬಹುದು. ಒಂದು ವೇಳೆ ನಿರ್ಲಕ್ಷಿಸಿದ್ದಲ್ಲಿ ಈ ಸಂಖ್ಯೆ 5 ಸಾವಿರವರೆಗೂ ಹೆಚ್ಚಾಗುವ ಸಾಧ್ಯತೆಗಳಿವೆ. ಮಾರ್ಚ್ 16ರ ನಂತರ ಸೋಂಕಿತರ ಸಂಖ್ಯೆಯ ಪ್ರಮಾಣದ ರೇಖೆ ಸ್ವಲ್ಪ ಏರಿಕೆ ಕಂಡು, ಸ್ಥಿರವಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆಯ ಏರಿಕೆಯ ರೇಖೆ ಇಳಿದಿದೆ ಎಂದು ಅಂದಾಜಿಸಲಾಗಿದೆ. ಕೊರೊನಾ ವೈರಸ್ ತಡೆಯಲು ಲಾಕ್‍ಡೌನ್ ಎಷ್ಟು ಪ್ರಮಾಣದಲ್ಲಿ ಕೆಲಸ ಮಾಡಿತು ಎಂಬುವುದು ಮುಂದಿನ ವಾರದಲ್ಲಿ ಸ್ಪಷ್ಟವಾಗಲಿದೆ ಎಂದು ಸಿನ್ಹಾ ಹೇಳುತ್ತಾರೆ.

30 ದಿನ 6 ರಾಷ್ಟ್ರಗಳು: ಕೋವಿಡ್-19 ಏರಿಕೆಯ ಪ್ರಮಾಣ ಮೂರರಿಂದ 1 ಸಾವಿರಕ್ಕೆ ತಲುಪಿದೆ. ಭಾರತದ ಕೊರೊನಾ ಗ್ರೋಥ್ ರೇಟ್ ನ್ನು ಸೌಥ್ ಕೊರಿಯಾಗೆ ಹೋಲಿಸಿದ್ರೆ ಎರಡು ದೇಶಗಳ ರೇಖೆಗಳು ಸಮಾನಾಂತರವಾಗಿದೆ. ಸ್ಪೇನ್, ಇಟಲಿ, ಇರಾನ್ ದೇಶಗಳ ಸೋಂಕಿತರ ಪ್ರಮಾಣದ ರೇಖೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 47 ಸಾವಿರ ತಲುಪಿದೆ.

ಭಾರತದಲ್ಲಿ ಕೊರೊನಾದ ಮೊದಲ 30 ದಿನಗಳನ್ನು ಇತರ ಆರು ರಾಷ್ಟ್ರಗಳಿಗೆ ತುಲನೆ ಮಾಡಿದಾಗ ಸೌಥ್ ಕೊರಿಯಾ, ಸ್ಪೇನ್, ಇರಾನ್ ಮತ್ತು ಇಟಲಿಗಿಂತ ಕಡಿಮೆಯಿದ್ದು, ಸಿಂಗಾಪುರಕ್ಕಿಂತ ಹೆಚ್ಚಿದೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಯ ಪ್ರಕಾರ ಈ ಅಂಕಿ-ಅಂಶಗಳಿವೆ. ಎಲ್ಲ ದೇಶಗಳು ಕೊರೊನಾ ತಡೆಗೆ ಹಲವು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿವೆ. ಹಾಗೆ ಭಾರತ ಸಹ 21 ದಿನ ಲಾಕ್‍ಡೌನ್ ಮಾಡಿಕೊಂಡು ಕೊರೊನಾ ತಡೆಗೆ ಶ್ರಮಿಸುತ್ತಿದೆ.

ವಾರದಿಂದ ವಾರಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಎಷ್ಟು ಏರಿಕೆ? (ಮಾರ್ಚ್ 29 ಅಂತ್ಯಕ್ಕೆ)
1. ಭಾರತ: 3-43-114-415-1,071
2. ಸೌಥ್ ಕೊರಿಯಾ: 4-23-28-104-1,766
3. ಸಿಂಗಾಪುರ: 4-18-43-75-90 (ಸದ್ಯ 91ಕ್ಕೆ ಏರಿಕೆಯಾಗಿದೆ)
4. ಸ್ಪೇನ್: 2-151-1,639-11,178-39,673 (ಸದ್ಯ 47 ಸಾವಿರ ತಲುಪಿದೆ)
5. ಇಟಲಿ: 3-650-3,858-15,113-41,035 (ಸದ್ಯ 41,035ಕ್ಕೆ ತಲುಪಿದೆ)
6. ಇರಾನ್: 2-141-2,922-9,000-1,7361 (ಸದ್ಯ 18,407ಕ್ಕೆ ತಲುಪಿದೆ)

ಆರು ರಾಷ್ಟ್ರಗಳ ಜೊತೆ ಭಾರತದ ಅಂಕಿ-ಸಂಖ್ಯೆಗಳು ಕಡಿಮೆ ಪ್ರಮಾಣದಲ್ಲಿವೆ. ಹಾಗಾಗಿ ಲಾಕ್‍ಡೌನ್ ಸೇರಿದಂತೆ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರೆವೆನ್ಷನ್ ಆ್ಯಂಡ್ ಕಂಟ್ರೋಲ್ ಪ್ರಕಾರ, ಭಾರತದಲ್ಲಿ ಕೊರನಾ ಹರಡುವಿಕೆ ಸರಾಸರಿ ಪ್ರಮಾಣ 2.76ರಿಂದ 3.25ರಷ್ಟಿದೆ. ಈ ಸರಾಸರಿ ಪ್ರಮಾಣದ ಸಂಖ್ಯೆಯನ್ನು ರಿಪ್ರೊಡೆಕ್ಷನ್ ನಂಬರ್/ಆರ್‍ಓ ಎಂದು ಕರೆಯಲಾಗುತ್ತದೆ. ಆರ್‍ಓ ಒಂದಕ್ಕಿಂತ ಕಡಿಮೆ ಇದ್ದಲ್ಲಿ ಯಾವುದೇ ಅಪಾಯ ಇಲ್ಲ ಎಂಬರ್ಥ.

ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ, ಸಾಮಾಜಿಕ ಅಂತರ ಕಾಯ್ದುಕೊಳ್ಳುವದರಿಂದ ಸೋಂಕಿನ ಹರಡುವಿಕೆ ಪ್ರಮಾಣ ತಗ್ಗಿಸಬಹುದು. ಇದರಿಂದ ಸೋಂಕಿತರ ಸಂಖ್ಯೆಯ ಕಡಿಮೆಯಾಗುತ್ತದೆ. ಅವಶ್ಯಕತೆ ಇದ್ದಾಗ ಮಾತ್ರ ಮನೆಯಿಂದ ಹೊರ ಬರಬೇಕು. ಇದರಿಂದ ಸೋಂಕಿನ ವೇಗವನ್ನು ತಗ್ಗಿಸಬಹುದು ಎಂದು ಹೇಳುತ್ತಾರೆ.

Comments

Leave a Reply

Your email address will not be published. Required fields are marked *