ಕ್ಷಿಪಣಿ ದಾಳಿಗೆ ಕೇರಳ ಮೂಲದ ವ್ಯಕ್ತಿ ಸಾವು – ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಎಚ್ಚರಿಕೆ ಸಂದೇಶ

– ಇಸ್ರೇಲ್‌ನ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಭಾರತೀಯರಿಗೆ ಕೇಂದ್ರ ಸೂಚನೆ

ಟೆಲ್‌ ಅವಿವಾ: ಇಸ್ರೇಲ್-ಲೆಬನಾನ್ ಗಡಿಯ ಬಳಿ ಕ್ಷಿಪಣಿ ದಾಳಿಯಲ್ಲಿ ಕೇರಳದ ವ್ಯಕ್ತಿಯೊಬ್ಬರು (Kerala Man) ಸಾವನ್ನಪ್ಪಿರುವ ಪ್ರಕರಣ ವರದಿಯಾದ ಬೆನ್ನಲ್ಲೇ ಭಾರತೀಯರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ಇಸ್ರೇಲ್‌ನ (Israel) ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಭಾರತೀಯರಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಇಸ್ರೇಲಿ ಅಧಿಕಾರಿಗಳು ನಮ್ಮ ಎಲ್ಲಾ ಪ್ರಜೆಗಳ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿ ಕ್ಷಿಪಣಿ ದಾಳಿಗೆ ಕೇರಳ ಮೂಲದ ವ್ಯಕ್ತಿ ಬಲಿ- ಇಬ್ಬರು ಗ್ರೇಟ್‌ ಎಸ್ಕೇಪ್‌

ಭದ್ರತಾ ಪರಿಸ್ಥಿತಿ ಮತ್ತು ಸ್ಥಳೀಯ ಸುರಕ್ಷತಾ ಸಲಹೆಗಳ ದೃಷ್ಟಿಯಿಂದ ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯರು, ವಿಶೇಷವಾಗಿ ಉತ್ತರ ಮತ್ತು ದಕ್ಷಿಣದ ಗಡಿ ಪ್ರದೇಶಗಳಲ್ಲಿ ಕೆಲಸ ಮಾಡುವವರು, ಇಸ್ರೇಲ್‌ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರವಾಗಲು ಸೂಚಿಸಲಾಗಿದೆ. ರಾಯಭಾರ ಕಚೇರಿಯು ಸಂಪರ್ಕದಲ್ಲಿದೆ.

ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮ ಕ್ಷಿಪಣಿ ದಾಳಿಯಲ್ಲಿ ಕೇರಳದ ಕೊಲ್ಲಂನ ವ್ಯಕ್ತಿಯೊಬ್ಬರು ನಿನ್ನೆ ಉತ್ತರ ಇಸ್ರೇಲ್‌ನ ಮಾರ್ಗಲಿಯೊಟ್‌ನಲ್ಲಿ ಸಾವನ್ನಪ್ಪಿದರು. ಭಾರತದಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಇಂದು ಬೆಳಗ್ಗೆ ಹೇಳಿಕೆಯಲ್ಲಿ ಕೇರಳದ ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಕೆಂಪು ಸಮುದ್ರದ ಅಡಿಯಲ್ಲಿದ್ದ 3 ಡೇಟಾ ಕೇಬಲ್‌ಗಳಿಗೆ ಕತ್ತರಿ – ವಿಶ್ವಾದ್ಯಂತ ಇಂಟರ್‌ನೆಟ್‌ ಸೇವೆಯಲ್ಲಿ ವ್ಯತ್ಯಯ

ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿ ಪಾಟ್ ನಿಬಿನ್ ಮ್ಯಾಕ್ಸ್‌ವೆಲ್ ಎಂದು ಗುರುತಿಸಲಾಗಿದೆ. ಗಾಯಗೊಂಡವರು ಇಡುಕ್ಕಿಯ ಪಾಲ್ ಮೆಲ್ವಿನ್ ಮತ್ತು ಬುಷ್ ಜೋಸೆಫ್ ಜಾರ್ಜ್ ಎಂದು ತಿಳಿದು ಬಂದಿದೆ.

ಮ್ಯಾಕ್ಸ್‌ವೆಲ್ ಅವರು ಎರಡು ತಿಂಗಳ ಹಿಂದೆಯಷ್ಟೇ ಇಸ್ರೇಲ್‌ಗೆ (Israel) ಆಗಮಿಸಿದ್ದರು. ಆದರೆ ದುರಾದೃಷ್ಟವಶಾತ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕ್ಷಿಪಣಿ ದಾಳಿಗೆ ಬಲಿಯಾಗಿದ್ದಾರೆ. ಇದೀಗ ಮ್ಯಾಕ್ಸ್‌ವೆಲ್‌ ಅವರು ಪತ್ನಿ ಹಾಗೂ 5 ವರ್ಷದ ಮಗಳನ್ನು ಅಗಲಿದ್ದಾರೆ. ಜೊತೆಗೆ ಇವರ ಪತ್ನಿ 7 ತಿಂಗಳ ಗರ್ಭಿಣಿ.