ಒಂದೇ ಸಲಕ್ಕೆ ಪಾಕ್‌ಗೆ ಹರಿದ 28,000 ಕ್ಯುಸೆಕ್ ನೀರು – ಹಠಾತ್ ಪ್ರವಾಹ ಭೀತಿ

ಶ್ರೀನಗರ: ಭಾರತ (India) 24 ಗಂಟೆಗಳ ಕಾಲ ಬಗ್ಲಿಹಾರ್ ಹಾಗೂ ಸಲಾಲ್ ಡ್ಯಾಂ ನೀರನ್ನು ತಡೆದು, ಒಂದೇ ಸಲಕ್ಕೆ ಬಿಡುಗಡೆ ಮಾಡಿದ್ದರಿಂದ ಪಾಕಿಸ್ತಾನದಲ್ಲಿ (Pakistan) ಹಠಾತ್‌ ಪ್ರವಾಹ ಭೀತಿ ಎದುರಾಗಿದೆ.

ಸಿಯಾಲ್ ಕೋಟೆ ಸೇರಿದಂತೆ ಅನೇಕ ಭಾಗಗಳಲ್ಲಿ ಚೆನಾಬ್ ನದಿ ತುಂಬಿ ಹರಿಯುತ್ತಿದೆ. ಸುಮಾರು 24 ಗಂಟೆಗಳ ಕಾಲ ನೀರನ್ನು ತಡೆಹಿಡಿದು ಬಿಡುಗಡೆ ಮಾಡಿದ್ದರಿಂದ ನದಿಯ ಕೆಳಭಾಗದಲ್ಲಿ ಹಠಾತ್ ಪ್ರವಾಹಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನವು ಸಿಯಾಲ್‌ಕೋಟ್, ಗುಜರಾತ್ ಮತ್ತು ಹೆಡ್ ಖಾದಿರಾಬಾದ್‌ ಪ್ರದೇಶಕ್ಕೆ ಪ್ರವಾಹ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ದಿಢೀರ್‌ 35 ಸಾವಿರದಿಂದ 3 ಸಾವಿರ ಕ್ಯುಸೆಕ್‌ಗೆ ಇಳಿಕೆಯಾಯ್ತು ನೀರು – ಭಾರತದ ʼಜಲ ಬಾಂಬ್‌ʼಗೆ ಪಾಕ್‌ ತತ್ತರ

ಭಾರತದ ವಾಟರ್ ವೆಪನ್ ಬಳಕೆಯಿಂದ ಪಾಕಿಸ್ತಾನಕ್ಕೆ ಒಂದು ಸಲ ಗಂಟಲು ಒಣಗಿ ಬಾಯಾರಿದ ಪರಿಸ್ಥಿತಿ, ಮಗದೊಂದು ಸಲ ಪ್ರವಾಹದ ಭೀತಿ ಎದುರಾಗುತ್ತಿದೆ. ಈ ರೀತಿಯ ಭಾರತದ ನೀರಾಟಕ್ಕೆ ಪಾಕ್ ಕಂಗಾಲಾಗಿದೆ.

ಭಾರತ (India) ನೀರನ್ನು ತಡೆದಿದ್ದರಿಂದ ಒಂದೇ ದಿನ ಚೆನಾಬ್‌ ನದಿಯ (Chenab River) ನೀರಿನ ಮಟ್ಟ 31,900 ಕ್ಯುಸೆಕ್‌ ಇಳಿಕೆಯಾಗಿತ್ತು. ಚೆನಾಬ್ ನದಿಗೆ ಅಡ್ಡಲಾಗಿ ರಾಮಬನದಲ್ಲಿ ಬಾಗ್ಲಿಹಾರ್ ಮತ್ತು ರಿಯಾಸಿಯಲ್ಲಿ ಸಲಾಲ್ ಜಲವಿದ್ಯುತ್ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗಿದೆ. ಸೋಮವಾರ ಈ ಎರಡು ಅಣೆಕಟ್ಟಿನಿಂದ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ನೀರು ಹರಿಸುವುದನ್ನು ನಿಲ್ಲಿಸಿದ ಪರಿಣಾಮ ಪಾಕಿಸ್ತಾನದ ಮರಾಲಾ ಬಳಿ ಭಾನುವಾರ 35,000 ಕ್ಯುಸೆಕ್‌ ನೀರು ಹರಿಯುತ್ತಿದ್ದರೆ, ಸೋಮವಾರ ಇದು 3,100 ಕ್ಯುಸೆಕ್‌ಗೆ ಇಳಿಕೆಯಾಗಿದೆ ಎಂದು ಪಾಕಿಸ್ತಾನದ ಡಾನ್‌ ವರದಿ ಮಾಡಿತ್ತು.

ಮರಾಲಾ ಬ್ಯಾರೇಜ್ ಸಲಾಲ್ ಅಣೆಕಟ್ಟಿನಿಂದ 76 ಕಿ.ಮೀ ದೂರದಲ್ಲಿದೆ. ಒಟ್ಟು 1.2 ದಶಲಕ್ಷ ಎಕರೆ ಅಡಿಗಳಷ್ಟು ನೀರು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಸಲಾಲ್‌ ಅಣೆಕಟ್ಟಯ ಭರ್ತಿಯಾದ ನಂತರ ಒಂದೇ ಬಾರಿಗೆ ಚೆನಾಬ್‌ ನದಿಗೆ ನೀರು ಹರಿಸಿದರೆ ಪಾಕ್‌ ಭಾಗದಲ್ಲಿ ಪ್ರವಾಹ ಎದುರಾಗಬಹುದು ಎಂದು ಅಧಿಕಾರಿಯೊಬ್ಬರು ಎಚ್ಚರಿಸಿದ್ದರು.

ಒಂದು ವೇಳೆ ಭಾರತ ಸರಿಯಾಗಿ ನೀರನ್ನು ಹರಿಸದೇ ಇದ್ದರೆ ಖಾರಿಫ್ ಬೆಳೆಗಳಿಗೆ ಭಾರೀ ಸಮಸ್ಯೆಯಾಗಲಿದೆ. ಈಗಾಗಲೇ 21% ನೀರಿನ ಕೊರತೆಯನ್ನು ಎದುರಿಸುತ್ತಿದೆ. ಚೆನಾಬ್‌ ನದಿಯ ಒಳಹರಿವು ಹಠಾತ್ ಇಳಿಕೆಯಾದರೆ ಖಾರಿಫ್ ಋತುವಿನ ಆರಂಭದಲ್ಲಿ ಕೊರತೆ ಎದುರಾಗಲಿದೆ ಎಂದು ವರದಿಯಾಗಿತ್ತು.

ಪಹಲ್ಗಾಮ್‌ ಭೀಕರ ನರಮೇಧಕ್ಕೆ (Pahalgam Terror Attack) ಪ್ರತಿಯಾಗಿ ಭಾರತ ಸಿಂಧೂ ನದಿಯ ಒಪ್ಪಂದವನ್ನು ಮೊದಲ ಬಾರಿಗೆ ಅಮಾನತಿನಲ್ಲಿಟ್ಟು ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದೆ. ಒಪ್ಪಂದವನ್ನು ಭಾರತ ಅಮಾನತಿನಲ್ಲಿಟ್ಟಿದೆ. ಇದನ್ನೂ ಓದಿ: ಭಾರತದ ವಿರುದ್ಧ ಸುಳ್ಳು ಆರೋಪ – ಪಾಕ್‌ಗೆ ಹಿಗ್ಗಾಮುಗ್ಗಾ ಜಾಡಿಸಿದ ವಿಶ್ವಸಂಸ್ಥೆ