ಕೆನಡಾದ 6 ರಾಜತಾಂತ್ರಿಕರನ್ನು ದೇಶದಿಂದಲೇ ಹೊರ ಹಾಕಿದ ಭಾರತ

ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ (Hardeep Singh Nijjar) ಹತ್ಯೆಯಲ್ಲಿ ಭಾರತೀಯ (India) ರಾಯಭಾರಿಯ ಪಾತ್ರವಿದೆ ಎಂದು ಕೆನಡಾ (Canada) ದೂರಿದ ಬೆನ್ನಲ್ಲೇ  ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆನಡಾದ 6 ಮಂದಿ ರಾಜತಾಂತ್ರಿಕರನ್ನು ಭಾರತ ಹೊರ ಹಾಕಿದೆ.

ಕೆನಡಾದಲ್ಲಿದ್ದ ಭಾರತೀಯ (India) ರಾಜತಾಂತ್ರಿಕ ಅಧಿಕಾರಿಗಳನ್ನು ಭಾರತ ಹಿಂದಕ್ಕೆ ಕರೆಸಿಕೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ನಿರ್ಧಾರ ಪ್ರಕಟವಾಗಿದೆ.

ಕೆನಡಾದ ರಾಜತಾಂತ್ರಿಕರನ್ನು ಅಕ್ಟೋಬರ್ 19 ರಂದು ರಾತ್ರಿ 11:59 ರೊಳಗೆ ಅಥವಾ ಅದಕ್ಕಿಂತಲೂ ಮೊದಲು ಭಾರತವನ್ನು ತೊರೆಯುವಂತೆ ತಿಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

 

 

ಭಾರತದಿಂದ ಹೊರಹಾಕಿದ್ದು ಯಾಕೆ?
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸುರ್ರೆ ನಗರದ ಗುರುದ್ವಾರದ ಬಳಿ ಖಲಿಸ್ತಾನಿ ಉಗ್ರ ನಿಜ್ಜಾರ್‌ ಆಗುಂತಕರ ಗುಂಡೇಟಿಗೆ ಬಲಿಯಾಗಿದ್ದ. ಈತನ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಆರೋಪಿಸಿದ ಬೆನ್ನಲ್ಲೇ ಎರಡು ದೇಶಗಳ ಮಧ್ಯೆ ರಾಜತಾಂತ್ರಿಕ ಸಮಸ್ಯೆ ಸೃಷ್ಟಿಯಾಗಿತ್ತು. ನಂತರ ಮಾತುಕತೆಯ ಮೂಲಕ ಎರಡು ದೇಶಗಳ ನಡುವಿನ ಬಿಕ್ಕಟ್ಟು ಬಗೆ ಹರಿದಿತ್ತು.

ಘಟನೆ ನಡೆದು ಒಂದು ವರ್ಷ ಕಳೆದ ಬಳಿಕ ಈ ವಿಚಾರವನ್ನು ಮತ್ತೊಮ್ಮೆ ಪ್ರಸ್ತಾಪಿಸಿ ಕೆನಡಾ ಭಾರತದ ಕೆಂಗಣ್ಣಿದೆ ಗುರಿಯಾಗಿದೆ. ಹತ್ಯೆಯ ಹಿಂದೆ ಭಾರತೀಯ ರಾಯಭಾರಿ ಸಂಜಯ್‌ಕುಮಾರ್‌ ವರ್ಮಾ ಅವರ ಪಾತ್ರವಿದ್ದು, ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಹೇಳುವ ಮೂಲಕ ಮತ್ತೆ ಕಿರಿಕ್‌ ಮಾಡಿದೆ.

ಕೆನಡಾ ನಡೆಗೆ ಭಾರತ ಸರ್ಕಾರ ಸಿಟ್ಟಾಗಿದ್ದು ಒಟ್ಟಾವದಲ್ಲಿದ್ದ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಅಷ್ಟೇ ಅಲ್ಲದೇ ಭಾರತೀಯ ಹೈಕಮಿಷನರ್‌ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನು ತನಿಖೆಯ ವ್ಯಾಪ್ತಿಗೆ ತರಬೇಕು ಎಂಬ ಕೆನಡಾ ಮನವಿಯನ್ನು ತಿರಸ್ಕರಿಸಿದೆ.

ನಿಜ್ಜರ್‌ ಹತ್ಯೆಯಲ್ಲಿ ಭಾರತದ ಪಾತ್ರವಿಲ್ಲ. ಭಾರತಕ್ಕೆ ಬೇಕಾಗಿರುವ ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ಗಳಿಗೆ ಕೆನಡಾ ಆಶ್ರಯ ನೀಡಿದೆ. ಪ್ರತ್ಯೇಕತಾವಾದಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿಲ್ಲ ಎಂದು ಹೇಳಿ ಭಾರತ ಕೆನಡಾಕ್ಕೆ ತಿರುಗೇಟು ನೀಡಿದೆ.