ಭಾರತದಲ್ಲಿ ಮಿತಿಮೀರಿ ಹಬ್ತಿದೆ ಕೊರೊನಾ- ಮತ್ತೊಬ್ಬ ಸೋಂಕಿತನ ಪತ್ತೆ

– ದುಬಾರಿಯಾಗ್ತಿದೆ ಮಾಸ್ಕ್ ಬೆಲೆ

ಬೆಂಗಳೂರು: ಇಷ್ಟು ದಿನ ಬೆಂಗಳೂರಿಗರು ಮಾತ್ರ ಕೊರೊನಾ ವೈರಸ್ ಬಗ್ಗೆ ಕೊಂಚ ತಲೆ ಕೆಡೆಸಿಕೊಂಡಿದ್ರು. ಆದರೆ ಇದೀಗ ರಾಜ್ಯದ ಹಲವೆಡೆ ಕೊರೊನಾ ಭೀತಿ ಎದುರಾಗಿದ್ದು, ಹಲವು ಜಿಲ್ಲೆಗಳಲ್ಲಿ ಸೋಂಕು ಪತ್ತೆಯಾಗಿದೆ.

ಹೌದು. ಕೊರೊನಾ ಎಂಬ ಮಾರಕ ರೋಗಕ್ಕೆ ಬೆಂಗಳೂರು ಪತರುಗುಟ್ಟಿದೆ. ಸೋಂಕು ತಗುಲಿದ ಶಂಕೆ ಮೇರೆಗೆ 8 ಮಂದಿ ಮೇಲೆ ನಿಗಾ ಇಡಲಾಗಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೊರೊನಾ ಭೀತಿ ಆವರಿಸಿದೆ. ಫ್ರಾನ್ಸ್ ನಿಂದ ವಾಪಸ್ಸಾದ ಹಾಸನದ ಯುವಕನಿಗೆ ಕೊರೊನಾ ಲಕ್ಷಣ ಕಂಡು ಬಂದಿದೆ. ಜಿಲ್ಲೆಗೆ ಬರುವ ವಿದೇಶಿ ಪ್ರವಾಸಿಗರ ಮೇಲೆಯೂ ನಿಗಾ ಇಡಲಾಗಿದೆ.

ಕೊರೊನಾ ವೈರಸ್ ಎಫೆಕ್ಟ್ ಹಾಸನದ ಪ್ರಮುಖ ಪ್ರವಾಸಿ ತಾಣಗಳಿಗೂ ತಟ್ಟಿದ್ದು ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಶ್ರವಣಬೆಳಗೊಳ, ಬೇಲೂರು, ಹಳೆಬೀಡಿಗೆ ಬರುತ್ತಿದ್ದ ವಿದೇಶಿ ಪ್ರವಾಸಿಗರ ಸಂಖ್ಯೆ ಭಾರೀ ಕಡಿಮೆಯಾಗಿದ್ದು, ಸ್ಥಳೀಯ ವ್ಯಾಪಾರಸ್ಥರು ಸರಿಯಾದ ವ್ಯಾಪಾರವಿಲ್ಲದೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕರೊನಾ ವೈರಸ್ ಭೀತಿ ಬಳ್ಳಾರಿಗೂ ಆವರಿಸಿದಂತೆ ಕಾಣ್ತಿದೆ. ಜಿಲ್ಲೆಯ ಹೊಸಪೇಟೆ, ತೋರಣಗಲ್ಲಿನ ಜಿಂದಾಲ್‍ನಲ್ಲಿ ಎರಡು ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಇವರ ರಕ್ತದ ಮಾದರಿಯನ್ನು ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೊರೊನಾ ಭೀತಿಯಿಂದ ಪಾರಾಗಲು ಮೆಡಿಕಲ್ ಶಾಪ್‍ಗಳಲ್ಲಿ ಮಾಸ್ಕ್ ಗಳು ಸಿಗುತ್ತಿಲ್ಲ. ಸಾಮಾನ್ಯ ಮಾಸ್ಕ್ ಗಳ ಬೆಲೆಯೂ ದುಪ್ಪಟ್ಟಾಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಸೌದಿ ಅರೇಬಿಯಾದಿಂದ ಬಂದಿದ್ದ ಹುನಗುಂದ ವ್ಯಕ್ತಿಗೆ ಸೊಂಕು ತಗುಲಿದ ಶಂಕೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಈ ಕೊರೊನಾ ಭಯಕ್ಕೆ ರಾಜ್ಯದ ಜನತೆ ಆತಂಕಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *