2 ಕೋವಿಡ್‌ ಲಸಿಕೆ, ಮೊಲ್ನುಪಿರವಿರ್‌ ಮಾತ್ರೆ ತುರ್ತು ಬಳಕೆಗೆ ಶಿಫಾರಸು

ನವದೆಹಲಿ: ಕೋವಿಡ್‌-19 ವಿರುದ್ಧದ ಎರಡು ಲಸಿಕೆಗಳು ಹಾಗೂ ಮಾತ್ರೆಯ ತುರ್ತು ಬಳಕೆಗೆ ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು ಅನುಮತಿ ನೀಡಲು ಶಿಫಾರಸು ಮಾಡಿದೆ.

ಸೆರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಕೋವೊವ್ಯಾಕ್ಸ್‌, ಬಯೋಲಾಜಿಕಲ್‌-ಇ ಸಂಸ್ಥೆಯ ಕೋರ್ಬೆವ್ಯಾಕ್ಸ್‌ ಲಸಿಕೆ ಹಾಗೂ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಎಸ್‌ಇಸಿ) ತಜ್ಞರ ಸಮಿತಿಯು ತಯಾರಿಸಿರುವ ಮೊಲ್ನುಪಿರವಿರ್‌ ಮಾತ್ರೆ ತುರ್ತು ಬಳಕೆಗೆ ಅನುಮೋದನೆ ಪಡೆದಿವೆ. ಕೋರ್ಬೆವ್ಯಾಕ್ಸ್‌ ಭಾರತದ ಮೊದಲ ಸ್ವದೇಶಿ ʼಆರ್‌ಬಿಡಿ ಪ್ರೊಟೀನ್‌ ಉಪ ಘಟಕ ಲಸಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಟ್ವೀಟ್‌ ಮಾಡಿ ತಿಳಿಸಿದ್ದಾರೆ. ಇದನ್ನೂ ಓದಿ: ಸಾಮಾನ್ಯ ಜನರಲ್ಲಿ ಮತ್ತೆ ಹೆಚ್ಚುತ್ತಿದೆ ಪಾಸಿಟಿವಿಟಿ – ಸಮುದಾಯಕ್ಕೆ ಹಬ್ಬಿತಾ ಓಮಿಕ್ರಾನ್ ಸೋಂಕು

ಕೋವಿಡ್‌ ವಿರುದ್ಧದ ಮೂರನೇ ಲಸಿಕೆಯನ್ನು ತಯಾರಿಸುವ ಮೂಲಕ ಭಾರತ ಹ್ಯಾಟ್ರಿಕ್‌ ಸಾಧನೆ ಮಾಡಿದೆ ಎಂದು ಸಚಿವರು ಹೇಳಿದ್ದಾರೆ.

ಮೊಲ್ನುಪಿರವಿರ್‌ ಮಾತ್ರೆಯನ್ನು ಕೆಲವು ಷರತ್ತುಬದ್ಧ ನಿಯಮಗಳೊಂದಿಗೆ ಬಳಕೆಗೆ ಸೂಚಿಸಲಾಗಿದೆ. ಆಮ್ಲಜನಕ ಮಟ್ಟ ಶೇ.93ಕ್ಕಿಂತ ಕಡಿಮೆ ಇರುವ ವಯಸ್ಕರು, ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಮಾತ್ರ ನೀಡಬಹುದಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಸೆರಮ್ ಸಂಸ್ಥೆಯ 2ನೇ ಲಸಿಕೆ ಕೋವೊವ್ಯಾಕ್ಸ್‌ ತುರ್ತು ಬಳಕೆಗೆ ಶಿಫಾರಸು

ಈವರೆಗೆ ಒಟ್ಟು 8 ಲಸಿಕೆಗಳು ಭಾರತದ ಔಷಧ ನಿಯಂತ್ರಕದಿಂದ ತುರ್ತು ಬಳಕೆಗೆ ಅನುಮೋದನೆ ಪಡೆದಿವೆ. ಕೋವಿಶೀಲ್ಡ್‌, ಜೈಕೋವ್‌-ಡಿ, ಸ್ಪುಟ್ನಿಕ್‌ ವಿ, ಮೋಡೆರ್ನಾ, ಜಾನ್ಸನ್‌ ಅಂಡ್‌ ಜಾನ್ಸನ್‌, ಕೋರ್ಬೆವ್ಯಾಕ್ಸ್‌, ಕೋವೊವ್ಯಾಕ್ಸ್‌ ಲಸಿಕೆಗಳಿಗೆ ಅನುಮತಿಸಲಾಗಿದೆ.

Comments

Leave a Reply

Your email address will not be published. Required fields are marked *