ಕೊರೊನಾ ಚೀನಾ ವೈರಸ್ ಅನ್ನಬೇಡಿ: ಭಾರತಕ್ಕೆ ಚೀನಾ ಮನವಿ

ನವದೆಹಲಿ: ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಕರೆಯಬೇಡಿ ಇದು ನಮ್ಮ ದೇಶದ ಮುಂದಿನ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ಚೀನಾ ಭಾರತಕ್ಕೆ ಮನವಿ ಮಾಡಿಕೊಂಡಿದೆ.

ಇಂದು ವಿಶ್ವವನ್ನೇ ಆತಂಕಕ್ಕೆ ತಳ್ಳಿರುವ ಕೊರೊನಾ ವೈರಸ್ ಮೊದಲಿಗೆ ಕಾಣಿಸಿಕೊಂಡಿದ್ದು, ಚೀನಾದ ವುಹಾನ್ ಪ್ರಾಂತ್ಯದಲ್ಲಿ. ಇಲ್ಲಿ ಮೊದಲಿಗೆ ಕಂಡುಬಂದ ಕೊರೊನಾ ಇಂದು ಇಡೀ ವಿಶ್ವವನ್ನೇ ಆವರಿಸಿದೆ. ಹೀಗಾಗಿ ಇದಕ್ಕೆ ಜಾಗತಿಕ ಮಟ್ಟದಲ್ಲಿ ಚೀನಾ ವೈರಸ್ ಎಂದು ಕರೆಯಲಾಗುತ್ತಿದೆ. ಈ ಕಾರಣಕ್ಕೆ ಮುಜುಗರಕ್ಕೆ ಒಳಗಾಗಿರುವ ಚೀನಾ, ಭಾರತ ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಕರೆಯುವುದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದೆ.

ಮಂಗಳವಾರ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರ ನಡುವೆ ನಡೆದ ಫೋನ್ ಸಂಭಾಷಣೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಜೈಶಂಕರ್ ಅವರ ಜೊತೆಯಲ್ಲಿ ಮಾತನಾಡಿದ ವಾಂಗ್ ಯಿ ಅವರು, ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಕರೆಯುವ ಸಂಕುಚಿತ ಮನಸ್ಥಿತಿ ಭಾರತಕ್ಕೆ ಇಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.

ಕೊರೊನಾ ವೈರಸ್‍ಗೆ ಚೀನಾ ವೈರಸ್ ಎಂದು ಬಳಸದಂತೆ ಬೇರೆ ದೇಶಗಳಿಗೆ ಮನವರಿಕೆ ಮಾಡಿಕೊಡಲು ಚೀನಾದ ರಾಜತಾಂತ್ರಿಕರು ವಿಶ್ವದದ್ಯಾಂತ ಅಭಿಯಾನ ನಡೆಸುತ್ತಿದ್ದಾರೆ. ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಕರೆದು, ನಮ್ಮ ದೇಶಕ್ಕೆ ಕಳಂಕ ಅಂಟಿಸುವ ಸಂಕುಚಿತ ಮನೋಭಾವನೆಯನ್ನು ಭಾರತ ವಿರೋಧ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಮಂಗಳವಾರ ವಾಂಗ್ ಯಿ ಅವರು ಹೇಳಿದ್ದಾರೆ.

ಈ ವಿಚಾರವಾಗಿ ಮಂಗಳವಾರ ಸಂಜೆ ಟ್ವೀಟ್ ಮಾಡಿರುವ ಭಾರತದ ಚೀನಾ ರಾಯಭಾರಿ ಸನ್ ವೀಡಾಂಗ್ ಅವರು, ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಲೇಬಲ್ ಮಾಡದೇ ಇರಲು ಭಾರತದ ವಿದೇಶಾಂಗ ಸಚಿವ ಡಾ.ಜೈಶಂಕರ್ ಅವರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಸಮುದಾಯಕ್ಕೆ ಒಗ್ಗಟ್ಟಿನ ಬಿಗಿ ಸಂದೇಶವನ್ನು ರವಾನಿಸಿದ್ದೇವೆ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿಯೇ ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಕರೆಯುತ್ತಿದ್ದಾರೆ ಎಂದು ಚೀನಾ ಆರೋಪಿಸಿದೆ. ಕೊರೊನಾ ವೈರಸ್ ಅನ್ನು ಚೀನಾಗೆ ಲೇಬೆಲ್ ಮಾಡುವುದನ್ನು ನಾವು ವಿರೋಧಿಸುತ್ತೇವೆ. ಡಬ್ಲ್ಯುಎಚ್‍ಒ ಮತ್ತು ಅಂತರರಾಷ್ಟ್ರೀಯ ಸಮುದಾಯಗಳು ಎರಡೂ, ನಿರ್ದಿಷ್ಟ ದೇಶಗಳು ಮತ್ತು ಪ್ರದೇಶಗಳಿಗೆ ವೈರಸ್‍ಗಳನ್ನು ಲೇಬಲ್ ಮಾಡುವುದನ್ನು ಸ್ಪಷ್ಟವಾಗಿ ವಿರೋಧಿಸುತ್ತವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಮಂಗಳವಾರ ನಿಯಮಿತ ಸಚಿವಾಲಯದ ಸಮಾವೇಶದಲ್ಲಿ ಹೇಳಿದ್ದಾರೆ.

ವಾಂಗ್ ಮತ್ತು ಜೈಶಂಕರ್ ನಡುವಿನ ದೂರವಾಣಿ ಸಂಭಾಷಣೆಯ ಬಗ್ಗೆ ಟ್ವೀಟ್ ಮಾಡಿರುವ ರಾಯಭಾರಿ ಸನ್, ಕೊರೊನಾ ವೈರಸ್ ವಿರುದ್ಧದ ಯುದ್ಧವನ್ನು ಭಾರತ ನಿಭಾಯಿಸಬಲ್ಲದು ಮತ್ತು ಗೆಲ್ಲಬಲ್ಲದು ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಚೀನಾ ಮತ್ತು ಭಾರತ ಪರಸ್ಪರ ಬೆಂಬಲಿಸಬೇಕು ಮತ್ತು ಜಂಟಿಯಾಗಿ ಜಾಗತಿಕ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡಬೇಕು ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ನಾವು ಇದ್ದೇವೆ ಎಂದು ಸಹಾನುಭೂತಿ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಾರೆ. ಚೀನಾ ಭಾರತದೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲು ಸಿದ್ಧವಾಗಿದೆ. ನಮ್ಮ ಸಾಮಥ್ರ್ಯದೊಳಗೆ ನಾವು ಸಹಾಯವನ್ನು ಒದಗಿಸುತ್ತೇವೆ ಎಂದು ವಾಂಗ್ ಅವರು ಜೈಶಂಕರ್ ಹೇಳಿದ್ದಾರೆ. ಚೀನಾದ ಸಹಾನುಭೂತಿ ಸಂದೇಶ ಮತ್ತು ಭಾರತಕ್ಕೆ ವೈದ್ಯಕೀಯ ಸಾಮಗ್ರಿಗಳ ಸಹಾಯಕ್ಕಾಗಿ ಜೈಶಂಕರ್ ಧನ್ಯವಾದ ಅರ್ಪಿಸಿದ್ದಾರೆ.

Comments

Leave a Reply

Your email address will not be published. Required fields are marked *