ದೇವರ ನಿರ್ಧಾರದಂತೆ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ – ಪ್ರಧಾನಿಯನ್ನು ಹೊಗಳಿದ ಶಿವಸೇನೆ

ಮುಂಬೈ: ದೇವರ ನಿರ್ಧಾರದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸತತ ಎರಡನೇ ಬಾರಿಗೆ ಭಾರತದ ನೇತೃತ್ವ ವಹಿಸಿದ್ದಾರೆ ಎಂದು ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಪಕ್ಷವಾದ ಶಿವಸೇನೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಇಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ, ಸತತ ಎರಡನೇ ಬಾರಿಗೆ ಮೋದಿ ಅವರು ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವುದು ದೇಶದ ಬಲವನ್ನು ಹೆಚ್ಚಿಸಲಿದೆ ಮತ್ತು ಇದು ದೇವರ ನಿರ್ಧಾರ ಎಂದು ಬರೆದುಕೊಂಡಿದೆ.

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದರೆ ಭಾರತದ ಪ್ರಜಾಪ್ರಭುತ್ವಕ್ಕೆ ತೊಂದರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದ ಮಮತಾ ಬ್ಯಾನರ್ಜಿ ಅವರನ್ನು ಶಿವಸೇನೆ ಕಾಲೆಳೆದಿದೆ. ಪಶ್ವಿಮ ಬಂಗಾಳದ ಚುನಾವಣೆಯ ಸಂದರ್ಭದಲ್ಲಿ ಸಾವನ್ನಪ್ಪಿದ ಬಿಜೆಪಿ ಕಾರ್ಯಕರ್ತರ ಕುಟುಂಬಗಳು ಕಾರ್ಯಕ್ರಮಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಿದೆ.

ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ನಂತರ ಮೋದಿ ಅವರು ವಿರೋಧ ಪಕ್ಷದವರ ವಿರುದ್ಧ ಯಾವುದೇ ಹೇಳಿಕೆಯನ್ನು ನೀಡಿಲ್ಲ. ನಮ್ಮ ಆಡಳಿತ ಸಂಯಮ ಮತ್ತು ಮಾನವೀಯತೆಯೊಂದಿಗೆ ಕೆಲಸ ಮಾಡುತ್ತೇವೆ ಎಂದು ಮೋದಿ ತಮ್ಮ ಕೆಲಸದ ಸಂಸ್ಕೃತಿ ಮೂಲಕ ತೋರಿಸಿದ್ದಾರೆ. ಅದಕ್ಕಾಗಿಯೇ ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಮೋದಿ ಅವರ ಸಮಾರಂಭ ನೋಡಲು ಜಗತ್ತು ಉತ್ಸಾಹದಿಂದ ಕಾಯುತ್ತಿದೆ ಎಂದು ಹೊಗಳಿ ಬರೆಯಲಾಗಿದೆ.

ಜನರ ಭಾವನೆಗಳ ವಿರುದ್ಧ ಕೆಲಸ ಮಾಡಬಾರದು ಎಂದು ನಿರ್ಧಿರಿಸಿರುವ ಮೋದಿ ಅವರು ಈ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅಹ್ವಾನ ಮಾಡಿಲ್ಲ ಎಂದು ಶಿವಸೇನೆ ಹೇಳಿದೆ.

Comments

Leave a Reply

Your email address will not be published. Required fields are marked *