ವರ್ಮಾ ಸೆಂಚುರಿ, ಆರ್ಶ್‌ದೀಪ್‌ ಬೌಲಿಂಗ್‌, ಅಕ್ಷರ್‌ ಸ್ಟನ್ನಿಂಗ್‌ ಕ್ಯಾಚ್‌ – ಭಾರತಕ್ಕೆ ವಿಜಯ

ಸೆಂಚೂರಿಯನ್‌: ನೀರಿಕ್ಷೆಯಂತೆ ರನ್‌ ಮಳೆಯ ಪಂದ್ಯದಲ್ಲಿ ತಿಲಕ್‌ ವರ್ಮಾ (Tilak Varma) ಅವರ ಅಜೇಯ ಶತಕ ಮತ್ತು ಕೊನೆಯಲ್ಲಿ ಆರ್ಶ್‌ದೀಪ್‌ ಸಿಂಗ್‌ (Arshdeep Singh) ಅವರ ಅತ್ಯುತ್ತಮ ಬೌಲಿಂಗ್‌ನಿಂದಾಗಿ ಭಾರತ ಆಫ್ರಿಕಾ ವಿರುದ್ಧ 11 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ (Team India) 6 ವಿಕೆಟ್‌ ನಷ್ಟಕ್ಕೆ 219 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ (South Africa) 7 ವಿಕೆಟ್‌ ನಷ್ಟಕ್ಕೆ 208 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಮಿಲ್ಲರ್‌- ಕ್ಲಾಸನ್‌ ಆಸರೆ:
84 ರನ್‌ಗಳಿಸುವಷ್ಟರಲ್ಲೊ ಆಫ್ರಿಕಾದ 4 ಮಂದಿ ಆಗ್ರ ಆಟಗಾರರು ಔಟಾದರು. ಈ ವೇಳೆ ಡೇವಿಡ್‌ ಮಿಲ್ಲರ್‌ ಮತ್ತು ಕ್ಲಾಸನ್‌ 35 ಎಸೆತಗಳಲ್ಲಿ 58 ರನ್‌ ಜೊತೆಯಾಟವಾಡಿ ಚೇತರಿಕೆ ನೀಡಿದರು.

ಪಾಂಡ್ಯ ಎಸೆದ ಬೌಲಿಂಗ್‌ನಲ್ಲಿ ಸಿಕ್ಸ್‌ ಸಿಡಿಸಲು ಹೋದ ಡೇವಿಡ್‌ ಮಿಲ್ಲರ್‌ ಅವರ ಕ್ಯಾಚನ್ನು ಅಕ್ಷರ್‌ ಪಟೇಲ್‌ ಬೌಂಡರಿ ಗೆರೆಯ ಬಳಿ ಗಾಳಿಯಲ್ಲಿ ಹಾರಿ ಹಿಡಿದು ಔಟ್‌ ಮಾಡುವ ಮೂಲಕ ರೋಚಕ ತಿರುವು ನೀಡಿದರು.

ಮಿಲ್ಲರ್‌ 18 ರನ್‌ಗಳಿಸಿ ಔಟಾದರೆ ಕ್ಲಾಸನ್‌ 41 ರನ್‌ (22 ಎಸೆತ, 1 ಬೌಂಡರಿ, 4 ಸಿಕ್ಸರ್‌) ಸಿಡಿಸಿ ವಿಕೆಟ್‌ ಒಪ್ಪಿಸಿದರು. ವಿಕೆಟ್‌ ಉರುಳುತ್ತಿದ್ದರೂ ಮಾರ್ಕೊ ಜಾನ್ಸೆನ್ ಸ್ಫೋಟಕ ಅರ್ಧಶತಕ ಸಿಡಿಸಿದರು. 54 ರನ್‌ (17 ಎಸೆತ, 4 ಬೌಂಡರಿ, 5 ಸಿಕ್ಸರ್‌) ಗಳಿಸಿದ್ದಾಗ ಆರ್ಶ್‌ದೀಪ್‌ ಎಸೆದ ಕೊನೆಯ ಓವರ್‌ನ ಮೂರನೇ ಎಸೆತದಲ್ಲಿ ಔಟಾದರು.

ಆರ್ಶ್‌ದೀಪ್‌ 3 ವಿಕೆಟ್‌ ಪಡೆದರೆ ವರುಣ್‌ ಚಕ್ರವರ್ತಿ 2 ವಿಕೆಟ್‌ ಕಿತ್ತರು. ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇತರೇ ರೂಪದಲ್ಲಿ 5 ರನ್‌ (4 ಲೆಗ್‌ ಬೈ, 1 ವೈಡ್‌) ನೀಡಿದ್ದು ಭಾರತದ ಗೆಲುವಿಗೆ ಸಹಕಾರಿಯಾಯಿತು. ಇದನ್ನೂ ಓದಿ: ಭಾರತ ಬರಲಿ, ಬಾರದೇ ಇರಲಿ ನಾವು ಚಾಂಪಿಯನ್ಸ್‌ ಟ್ರೋಫಿ ಆಯೋಜಿಸುತ್ತೇವೆ: ಪಾಕಿಸ್ತಾನ
ಸ್ಫೋಟಕ ಬ್ಯಾಟಿಂಗ್‌
ಟಾಸ್‌ ಸೋತು ಭಾರತ ಇನ್ನಿಂಗ್ಸ್‌ ಆರಂಭಿಸುತ್ತಿದ್ದಂತೆ 2ನೇ ಎಸೆತದಲ್ಲೇ ಸಂಜು‌ ಸ್ಯಾಮ್ಸನ್‌ ಕ್ಲೀನ್‌ ಬೌಲ್ಡ್‌ ಆದರು. ಬಳಿಕ 2ನೇ ವಿಕೆಟ್‌ಗೆ ಜೊತೆಗೂಡಿದ ತಿಲಕ್‌ ವರ್ಮಾ ಹಾಗೂ ಆರಂಭಿಕ ಅಭಿಷೇಕ್‌ ಶರ್ಮಾ ಎದುರಾಳಿ ಬೌಲರ್‌ಗಳನ್ನು ಹಿಗ್ಗಾಮುಗ್ಗ ಚಚ್ಚಿ, ಪವರ್‌ ಪ್ಲೇ ಹೊತ್ತಿಗೆ 70 ರನ್‌ ಕಲೆಹಾಕಿದ್ದರು. 2ನೇ ವಿಕೆಟ್‌ಗೆ ಈ ಜೋಡಿ 52 ಎಸೆತಗಳಲ್ಲಿ ಬರೋಬ್ಬರಿ 107 ರನ್‌ ಪೇರಿಸಿತ್ತು.

ಈ ವೇಳೆ ಅರ್ಧಶತಕ ಸಿಡಿಸಿ ಸ್ಫೋಟಕ ಬ್ಯಾಟಿಂಗ್‌ ಮಾಡುತ್ತಿದ್ದ ಅಭಿಷೇಕ್‌ ಶರ್ಮಾ ಸಿಕ್ಸರ್‌ ಸಿಡಿಸಲು ಯತ್ನಿಸಿ ಸ್ಟಂಪ್‌ ಔಟ್‌ಗೆ ತುತ್ತಾದರು. ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್‌ ಹಾಗೂ ತಿಲಕ್‌ ವರ್ಮಾ ಜೋರಿ 30 ಎಸೆತಗಳಲ್ಲಿ 58 ರನ್‌ಗಳ ಜೊತೆಯಾಟವೊಂದು ತಂಡದ ಬೃಹತ್‌ ಮೊತ್ತಕ್ಕೆ ಕಾರಣವಾಯಿತು.

ವರ್ಮಾ ಚೊಚ್ಚಲ ಶತಕ:
ಮೊದಲ ಓವರ್‌ನಿಂದಲೇ ಹರಿಣರ ಬೌಲರ್‌ಗಳನ್ನು ಬೆಂಡೆತ್ತಿದ ತಿಲಕ್ 8 ಬೌಂಡರಿ ಹಾಗೂ 6 ಸಿಕ್ಸರ್​ಗಳ ನೆರವಿನಿಂದ ಶತಕ ಪೂರೈಸಿದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಭಾರತದ 11ನೇ ಆಟಗಾರ ಎಂಬ ಹೆಗ್ಗಳಿಕೆಗೆ ತಿಲಕ್ ವರ್ಮಾ ಪಾತ್ರರಾದರು. ಹಾಗೆಯೇ ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ ಭಾರತದ 5ನೇ ಆಟಗಾರ ಜೊತೆಗೆ ಭಾರತದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಒಟ್ಟಾರೆ 191.07 ಸ್ಟ್ರೇಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ತಿಲಕ್‌ ವರ್ಮಾ 56 ಎಸೆತಗಳಲ್ಲಿ 107 ರನ್‌ (7 ಸಿಕ್ಸರ್‌, 8 ಬೌಂಡರಿ) ಸಿಡಿಸಿ ಅಜೇಯರಾಗುಳಿದರು.

ಟೀಂ ಇಂಡಿಯಾ ಪರ 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಭಿಷೇಕ್‌ ಶರ್ಮಾ 25 ಎಸೆತಗಳಲ್ಲಿ ಸ್ಫೋಟಕ 50 ರನ್‌ (5 ಸಿಕ್ಸರ್‌, 3 ಬೌಂಡರಿ), ಹಾರ್ದಿಕ್‌ ಪಾಂಡ್ಯ 18 ರನ್‌, ರಮಣದೀಪ್‌ ಸಿಂಗ್‌ 15 ರನ್‌ ಗಳಿಸಿದರು. ಇದಲ್ಲದೇ 10 ವೈಡ್‌, 6 ಬೈಸ್‌, 3 ನೋಬಾಲ್‌ ಸೇರಿ 19 ರನ್‌ ಹೆಚ್ಚುವರಿ ಸೇರ್ಪಡೆಯಾಯಿತು.