ಇಂಡೋ-ಪಾಕ್ ಪಂದ್ಯ- ಕೆನಡಾ ದಂಪತಿಗಳ ಜೆರ್ಸಿಗೆ ನೆಟ್ಟಿಗರು ಫಿದಾ

ನವದೆಹಲಿ: ಭಾನುವಾರ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಭಾರತ ಮತ್ತು ಪಾಕ್ ನಡುವಿನ ಪಂದ್ಯ ನೋಡಲು ಅಭಿಮಾನಿಗಳು ತಮ್ಮದೇ ವಿನೂತನ ಶೈಲಿಯಲ್ಲಿ ಬಂದು ತಮ್ಮ ತಮ್ಮ ತಂಡಗಳನ್ನು ಹುರಿದುಂಬಿಸಿದರು.

ಅದರಂತೆ ಕೆನಡಾ ದಂಪತಿ ಧರಿಸಿದ್ದ ವಿನೂತನ ಶೈಲಿಯ ಜೆರ್ಸಿ ಈಗ ಎಲ್ಲರ ಗಮನ ಸೆಳೆದಿದೆ. ಪಂದ್ಯವನ್ನು ವಿಕ್ಷೀಸಲು ಬಂದಿದ್ದ ಕೆನಡಾ ಜೋಡಿ ಪಾಕಿಸ್ತಾನ ಮತ್ತು ಭಾರತ ಎರಡು ದೇಶಗಳನ್ನು ಪ್ರತಿನಿಧಿಸುವ ಉಡುಪನ್ನು ಧರಿಸಿ ಕ್ರೀಡಾಭಿಮಾನ ಮೆರೆದಿದ್ದಾರೆ.

ದಂಪತಿಗಳು ಅವರ ಟಿ-ಶರ್ಟ್‍ನಲ್ಲಿ ಅರ್ಧದಷ್ಟು ಭಾಗ ಭಾರತದ ಜೆರ್ಸಿಯಾದರೆ ಇನ್ನುಳಿದ ಅರ್ಧದಷ್ಟು ಭಾಗ ಪಾಕಿಸ್ತಾನ ಜೆರ್ಸಿ ಇರುವ ಟಿ-ಶರ್ಟ್ ಧರಿಸಿ ಬಂದಿದ್ದರು. ಈ ಮೂಲಕ ಎರಡು ರಾಷ್ಟ್ರಗಳ ಮೇಲೆ ತಮಗಿರುವ ಅಭಿಮಾನವನ್ನು ತೋರಿದ್ದಾರೆ.

ಈ ಫೋಟೋವನ್ನು ಲಂಡನ್ ಮೂಲದ ಲಕ್ಷ್ಮಿ ಕೌಲ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದು ಈಗ ಈ ಫೋಟೋ ಸಖತ್ ವೈರಲ್ ಆಗಿದೆ. ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಟ್ವೀಟ್‍ಗೆ 2,500 ರೀಟ್ವೀಟ್‍ಗಳು ಮತ್ತು 13,305 ಲೈಕ್‍ಗಳು ಬಂದಿವೆ.

ಈ ದಂಪತಿಗಳ ಫೋಟೋ ಹಾಕಿದ ಲಕ್ಷ್ಮಿ ಕೌಲ್ ಅವರು, ಈ ವ್ಯಕ್ತಿ ಪಾಕಿಸ್ತಾನ ಮೂಲದವನು ಮತ್ತು ಅವನ ಹೆಂಡತಿ ಭಾರತ ಮೂಲದವಳು ಎಂದು ಬರೆದುಕೊಂಡಿದ್ದಾರೆ. ಈ ದಂಪತಿಗಳು ಕ್ರಿಕೆಟ್ ಆಟವನ್ನು ಆಚರಿಸಲು ಬಂದಿದ್ದಾರೆ. ಕ್ರಿಕೆಟ್ ಆಟದ ನಿಜವಾದ ಸಾರವನ್ನು ಪ್ರಪಂಚಕ್ಕೆ ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‍ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೇವಲ 113 ಎಸೆತಗಳಿಗೆ ಭರ್ಜರಿ 140 (14 ಬೌಂಡರಿ, 3 ಸಿಕ್ಸರ್) ಬಾರಿಸಿದ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಸ್ಥಾನಕ್ಕೆ ಭಾಜನರಾದರು.

Comments

Leave a Reply

Your email address will not be published. Required fields are marked *