– ವಿಶ್ವಾದ್ಯಂತ 29 ಲಕ್ಷ ಮಂದಿಗೆ ತಗುಲಿದ ಸೋಂಕು
– ಭಾರತದಲ್ಲಿ 884 ಮಂದಿ ಕೊರೊನಾಗೆ ಬಲಿ
ನವದೆಹಲಿ: ದೇಶದಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದು, ಸೋಂಕಿತರ ಸಂಖ್ಯೆ 28 ಸಾವಿರಕ್ಕೆ ತಲುಪಿದೆ. ಈವರೆಗೆ ದೇಶದಲ್ಲಿ 884 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇತ್ತ ವಿಶ್ವಾದ್ಯಂತ 29,95,043 ಮಂದಿಗೆ ಸೋಂಕು ತಗುಲಿದ್ದು, 2,07,000 ಮಂದಿಯನ್ನು ಕೊರೊನಾ ಬಲಿ ಪಡೆದಿದೆ.

ಸದ್ಯ ಭಾರತದಲ್ಲಿ 28,062 ಮಂದಿಗೆ ಸೋಂಕು ತಗುಲಿದೆ. ಈ ಸೋಂಕಿತ ಪ್ರಕರಣದಲ್ಲಿ ಶೇ. 50ರಷ್ಟು ಪ್ರಕರಣ ಮಹಾರಾಷ್ಟ್ರ, ಗುಜರಾತ್ ಹಾಗೂ ದೆಹಲಿಯಲ್ಲಿ ವರದಿಯಾಗಿದೆ. ಈವರೆಗೆ 884 ಮಂದಿ ಕೊರೊನಾಗೆ ಬಲಿಯಾಗಿದ್ದು, 6,527 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ 8,068 ಸೋಂಕಿತ ಪ್ರಕರಣ ವರದಿಯಾಗಿದ್ದು, 342 ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್‍ನಲ್ಲಿ 3,301 ಮಂದಿ ಸೋಂಕಿಗೆ ತುತ್ತಾಗಿದ್ದು, 151 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ದೆಹಲಿಯಲ್ಲಿ 2,918 ಮಂದಿಗೆ ಸೋಂಕು ತಗುಲಿದ್ದು, 54 ಮಂದಿ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. ಇತ್ತ ಕರ್ನಾಟಕದಲ್ಲಿ 503 ಮಂದಿಗೆ ಸೋಂಕು ತಗುಲಿದ್ದು, 19 ಮಂದಿ ಸಾವನ್ನಪ್ಪಿದ್ದಾರೆ. 182 ಮಂದಿ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಇತ್ತ ವಿಶ್ವಾದ್ಯಂತ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಲೇ ಇದ್ದು, ಅಮೆರಿಕಾ ಅಕ್ಷರಶಃ ಕೊರೊನಾ ಹಾವಳಿಗೆ ತತ್ತರಿಸಿ ಹೋಗಿದೆ. ಅಮೆರಿಕದಲ್ಲಿಯೇ ಅತೀ ಹೆಚ್ಚು ಕೊರೊನಾ ಸೋಂಕು ಹರಡಿದ್ದು, ವಿಶ್ವಾದ್ಯಂತ ವರದಿಯಾದ ಪ್ರಕರಣಗಳಲ್ಲಿ ಶೇ. 30ರಷ್ಟು ಪ್ರಕರಣ ಅಮೆರಿಕದಲ್ಲಿ ಪತ್ತೆಯಾಗಿದೆ. ಅಲ್ಲದೇ ವಿಶ್ವಾದ್ಯಂತ ವರದಿಯಾದ ಸೊಂಕಿತರ ಸಾವಿನ ಪ್ರಕರಣಗಳಲ್ಲಿಯೂ ಶೇ. 25ರಷ್ಟು ಅಮೆರಿಕದಲ್ಲಿಯೇ ವರದಿಯಾಗಿದೆ. ಈವರೆಗೆ ಅಮೆರಿಕದಲ್ಲಿ 9,39,249, ಸ್ಪೇನ್‍ನಲ್ಲಿ 2,23,759, ಇಟಲಿಯಲ್ಲಿ 1,95,351, ಫ್ರಾನ್ಸ್ ನಲ್ಲಿ 1,61,665 ಹಾಗೂ ಜರ್ಮನಿಯಲ್ಲಿ 1,56,513 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.

Leave a Reply