ಚುನಾವಣಾ ವೆಚ್ಚಕ್ಕೆ ಕಿಡ್ನಿ ಮಾರಲು ಮುಂದಾದ ಪಕ್ಷೇತರ ಅಭ್ಯರ್ಥಿ

ದಿಸ್ಪುರ್: ಪಕ್ಷೇತರ ಅಭ್ಯರ್ಥಿಯೊಬ್ಬರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಆದರೆ ಪ್ರಚಾರಕ್ಕಾಗಿ ಖರ್ಚು ಮಾಡಲು ತಮ್ಮ ಮೂತ್ರಪಿಂಡವನ್ನೇ (ಕಿಡ್ನಿ) ಮಾರಲು ಮುಂದಾಗಿರುವುದು ಬೆಳಕಿಗೆ ಬಂದಿದೆ.

ಅಸ್ಸಾಂನ ಕೊಕ್ರಝಾರ್ ಜಿಲ್ಲೆಯ ಮೊಡತಿ ಗ್ರಾಮದ ನಿವಾಸಿ 26 ವರ್ಷದ ಸುಕುರ್ ಅಲಿಯೇ ಕಿಡ್ನಿ ಮಾರಲು ಮುಂದಾದ ಅಭ್ಯರ್ಥಿ. ಇವರು ಧುಬ್ರಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ ಪ್ರಚಾರದ ವೆಚ್ಚಕ್ಕೆ ಹಣ ಸಂಗ್ರಹಿಸುತ್ತಿದ್ದೇನೆ. ಒಂದು ವೇಳೆ ಹಣ ಸಂಗ್ರಹಿಸಲು ಸಾಧ್ಯವಾಗದಿದ್ದರೆ ಕಿಡ್ನಿ ಮಾರುತ್ತೇನೆ ಎಂದು ಸುಕುರ್ ಅಲಿ ತಿಳಿಸಿದ್ದಾರೆ.

ಕೆಲವರು ಸ್ವ-ಹಿತಾಸಕ್ತಿಗಾಗಿ ರಾಜಕೀಯ ಪ್ರವೇಶ ಮಾಡುತ್ತಾರೆ. ಅಂತಹ ವ್ಯಕ್ತಿಗಳನ್ನು ಚಿಕ್ಕಂದಿನಿಂದ ನೋಡಿದ್ದೇನೆ. ಬಡವರಿಗೆ ಸಹಾಯ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಈ ಕನಸನ್ನು ಈಡೇರಿಸಲು ಕಿಡ್ನಿ ಮಾರಲು ಕೂಡ ಹಿಂದೇಟು ಹಾಕುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸುಕುರ್ ಅಲಿ ಅವರು ನಾವಿಕನಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕೆಲ ವರ್ಷಗಳ ಹಿಂದೆ ತಮ್ಮ ಜಮೀನಿನ ಸ್ವಲ್ಪ ಭಾಗವನ್ನು ಮಾರಿ, ಕೂಲಿ ಕೆಲಸ ಮಾಡುವ ಮೂಲಕ ಹಣ ಸಂಗ್ರಹಿಸಿ ಶಿಬಾಲಿ ನದಿಗೆ ಬಿದಿರಿನ ಸೇತುವೆ ನಿರ್ಮಿಸಿದ್ದರು. ಇದರಿಂದಾಗಿ ಅನೇಕರಿಗೆ ಅನುಕೂಲವಾಗಿತ್ತು. ಆದರೆ ಈಗ ಬೋಟ್‍ನಲ್ಲಿ ಪ್ರಯಾಣಿಸುವವರ ಸಂಖ್ಯೆ ಇಳಿದಿದ್ದು, ಸುಕುರ್ ನಿರುದ್ಯೋಗಿಯಾಗಿದ್ದಾರೆ.

ಅಸ್ಸಾಂ ರಾಜ್ಯದಲ್ಲಿ ಒಟ್ಟು 14 ಲೋಕಸಭಾ ಕ್ಷೇತ್ರಗಳಿದ್ದು, ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆ ಏಪ್ರಿಲ್ 11ರಂದು ನಡೆಯಲಿದೆ. ಎರಡು ಹಾಗೂ ಮೂರನೇ ಹಂತದ ಚುನಾವಣೆ ಕ್ರಮವಾಗಿ 18 ಮತ್ತು 23ರಂದು ನಡೆಯಲಿದೆ.

Comments

Leave a Reply

Your email address will not be published. Required fields are marked *