ಲಂಡನ್: ಜಸ್ಪಿತ್ ಬುಮ್ರಾ, ಮೊಹಮದ್ ಶಮಿ ಮಾರಕ ಬೌಲಿಂಗ್ ದಾಳಿ ಹಾಗೂ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಇಂಗ್ಲೆಂಡ್‌ನ ಕೆನ್ನಿಂಗ್ಟನ್‌ನ ಓವಲ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ತಂಡ 25.2 ಓವರ್‌ಗಳಲ್ಲಿ 110 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪಮೊತ್ತದ ಗುರಿ ಬೆನ್ನತ್ತಿದ ಭಾರತ 18.4 ಓವರ್‌ಗಳಲ್ಲೇ ಯಾವುದೇ ವಿಕೆಟ್ ನಷ್ಟವಿಲ್ಲದೇ 114 ರನ್‌ಗಳಿಸಿ ಆಂಗ್ಲರನ್ನು ಮೊದಲ ಪಂದ್ಯದಲ್ಲೇ ಮಣ್ಣು ಮುಕ್ಕಿಸಿತು.

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೊನೆಯವರೆಗೂ ವಿಕೆಟ್ ಬಿಟ್ಟುಕೊಡದೇ ಆಂಗ್ಲ ಬೌಲರ್‌ಗಳ ಬೆವರಿಳಿಸಿದರು. ಇದನ್ನೂ ಓದಿ: 9 ವರ್ಷದ ಬಾಲಕನಾಗಿದ್ದಾಗ ನನ್ನನ್ನು ಕಳ್ಳಸಾಗಣೆ ಮಾಡಲಾಗಿತ್ತು: ಒಲಿಂಪಿಕ್, ವಿಶ್ವ ಚಾಂಪಿಯನ್‌ನ ಸ್ಫೋಟಕ ಹೇಳಿಕೆ
ರೋಹಿತ್ ಆಕರ್ಷಕ ಅರ್ಧ ಶತಕ:
ಐಪಿಎಲ್‌ನಲ್ಲಿ ತೀವ್ರ ಮುಖಭಂಗಕ್ಕೀಡಾಗಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದು, ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ರೋಹಿತ್ ಶರ್ಮಾ 58 ಎಸೆತಗಳಲ್ಲಿ 76 ರನ್ (7 ಬೌಂಡರಿ, 5 ಸಿಕ್ಸರ್) ಗಳಿಸಿದರು. ಇದಕ್ಕೆ ಜೊತೆಯಾಗಿ ಸಾಥ್ ನೀಡಿದ ಶಿಖರ್ ಧವನ್ 54 ಎಸೆತಗಳಲ್ಲಿ 31 ರನ್ ( 4 ಬೌಂಡರಿ) ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ನೆರವಾದರು.

ಬೂಮ್ರಾ ಬೌಲಿಂಗ್, ಶಮಿ ಶೈನ್:
ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ತನ್ನ ಮೊದಲ ಓವರ್‌ನಿಂದಲೇ ಆರ್ಭಟಿಸಲು ಆರಂಭಿಸಿದ್ದರು. ತನ್ನ ಪ್ರಥಮ ಓವರ್‌ನಲ್ಲಿ ಜೇಸನ್ ರಾಯ್ ಹಾಗೂ ಜೋ ರೂಟ್ ಇಬ್ಬರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಬಳಿಕ 7 ರನ್‌ಗಳಿಸಿದ್ದ ಬೈರ್‌ಸ್ಟೋವ್ ಕೂಡ ಬೂಮ್ರಾ ದಾಳಿಗೆ ಬಲಿಯಾದರು. ನಂತರದಲ್ಲಿ ಕ್ರೀಸ್‌ಗಿಳಿದ ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ವಿಲ್ಲಿ ಹಾಗೂ ಬ್ರಿಡನ್ ಕೇರ್ಸ್ ಶೂನ್ಯ ಸುತ್ತಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಮೊಹಮದ್ ಶಮಿ 3 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ಪಡೆದು ಮಿಂಚಿದರು.

ಇಂಗ್ಲೆಂಡ್‌ಗೆ ಆರಂಭಿಕ ಆಘಾತ:
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಜೇಸನ್ ರಾಯ್ ಶೂನ್ಯಕ್ಕೆ ಔಟಾಗುವ ಮೂಲಕ ಆರಂಭಿಕ ಆಘಾತ ಅನುಭವಿಸಿತು. ನಂತರ ಬಂದ ಜೋ ರೂಟ್, ಬೆನ್‌ಸ್ಟೋಕ್ಸ್ ಸಹ ಶೂನ್ಯ ಸಾಧನೆ ಮಾಡಿದರು. ಈ ಮೂಲಕ ಇಂಗ್ಲೆಂಡ್ ಸಂಕಷ್ಟಕ್ಕೆ ತುತ್ತಾಯಿತು. ಇದನ್ನೂ ಓದಿ: ವೈರಲ್ ಆಗುತ್ತಿದೆ SKY ಸಿಡಿಸಿದ ಬ್ಯಾಕ್‍ವರ್ಡ್ ಪಾಯಿಂಟ್ ಸಾಲಿಡ್ ಸಿಕ್ಸ್
ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಜೋಸ್ ಬಟ್ಲರ್ ತಂಡಕ್ಕೆ ಆಸರೆಯಾಗಲು ಮುಂದಾದರು ಆದರೆ ಸಿಕ್ಸರ್ ಸಿಡಿಸುವ ಭರದಲ್ಲಿ ಬೌಂಡರಿ ಲೈನ್‌ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೂ ತಂಡಕ್ಕೆ 30 ರನ್‌ಗಳನ್ನು ತಂದುಕೊಟ್ಟರು. ನಂತರಲ್ಲಿ ಬಂದ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಇಂಗ್ಲೆಂಡ್ ತಂಡವು ಹೀನಾಯವಾಗಿ ಸೋಲನ್ನು ಅನುಭವಿಸಿತು. ಡೇವಿಡ್ ವಿಲ್ಲಿ 21 ರನ್ ಗಳಿಸಿದರೂ ಭಾರತದ ಬೌಲರ್‌ಗಳ ಪರಾಕ್ರಮದ ಮುಂದೆ ಇಂಗ್ಲೆಂಡ್ ಮಂಕಾಯಿತು. ಅಂತಿಮವಾಗಿ 25.2 ಓವರ್‌ಗಳಲ್ಲಿ 110ಕ್ಕೆ ಇಂಗ್ಲೆಂಡ್ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

Leave a Reply