ಮಳೆಯಿಂದ ಉಂಟಾದ ನಷ್ಟಕ್ಕೆ ನೀಡುತ್ತಿರುವ ಪರಿಹಾರ ಮೊತ್ತವನ್ನು ಹೆಚ್ಚಿಸಿ – ಸಂಸದ ಪ್ರತಾಪ್ ಸಿಂಹ ಮನವಿ

ನವದೆಹಲಿ: ಕೊಡಗು ಹಾಗೂ ಕರಾವಳಿ ಕರ್ನಾಟಕ ಭಾಗದಲ್ಲಿ ಸತತ ಎರಡು ತಿಂಗಳಿನಿಂದ ಭಾರೀ ಮಳೆಯಿಂದಾಗಿ ಆಗಿರುವ ನಷ್ಟವನ್ನು ಸರಿಪಡಿಸಲು ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ(ಎನ್‍ಡಿಆರ್‍ಎಫ್) ಯಿಂದ ನೀಡುತ್ತಿರುವ ಸಹಾಯದ ಮೊತ್ತವನ್ನು ಹೆಚ್ಚಿಸುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.

ಲೋಕಸಭಾ ಕಲಾಪದಲ್ಲಿ ಮಾತನಾಡಿದ ಅವರು, ತಮಿಳುನಾಡು ಸರ್ಕಾರ ಕರ್ನಾಟಕದ ಕೊಡಗು ಜಿಲ್ಲೆಗೆ ಋಣಿಯಾಗಿರಬೇಕು. ಕಾವೇರಿ ನದಿ ಹುಟ್ಟುವುದು ನಮ್ಮ ಕ್ಷೇತ್ರದಲ್ಲಿ. ಈ ಬಾರಿ ಕರಾವಳಿ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ತಮಿಳುನಾಡು-ಕರ್ನಾಟಕ ನಡುವಿನ ನೀರಾವರಿ ಸಮಸ್ಯೆಗೆ ವಿರಾಮ ಬಿದ್ದಿದೆ. ಉತ್ತಮ ಮಳೆಯಿಂದ ಕ್ಷೇತ್ರದ 4 ಡ್ಯಾಂ ಗಳು ತುಂಬಿದ್ದು, ತಮಿಳುನಾಡಿಗೆ ಹೆಚ್ಚಿನ ನೀರು ಹರಿದುಹೋಗುತ್ತಿದೆ. ಎಷ್ಟೇ ಮಳೆಯಾದರು ತಮ್ಮ ಕ್ಷೇತ್ರದ ಜನರು ಅದನ್ನು ಸ್ವಾಗತಿಸುತ್ತಾರೆ. ಆದರೆ ಭಾರೀ ಮಳೆಯಿಂದ ಈ ಭಾಗದ ಜನರು ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ದೇಶದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ 30% ರಷ್ಟು ಬೆಳೆಯನ್ನು ಕೊಡಗಿನಲ್ಲಿ ಬೆಳೆಯಲಾಗುತ್ತದೆ. ಅಲ್ಲದೇ ದೇಶದಲ್ಲಿ ಉತ್ಪಾದನೆಯಾಗುವ 15% ರಷ್ಟು ಕಾಳು ಮೆಣಸು ಸಹ ಇಲ್ಲಿ ಬೆಳೆಯಲಾಗುತ್ತಿದೆ. ಆದರೆ ಈ ಬಾರಿ ಮಳೆಯಿಂದ ಹೆಚ್ಚಿನ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಈ ಬಾರಿ ಮಳೆಯಿಂದ ಉಂಟಾದ ಅನಾಹುತ ಬಗ್ಗೆಯೂ ಮಾಹಿತಿ ನೀಡಿದ ಸಚಿವರು, ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಚಿಕ್ಕಮಗಳೂರು, ಬೆಳಗಾವಿ, ಬೀದರ್, ಚಾಮರಾಜನಗರ, ದಕ್ಷಿಣ ಕನ್ನಡ, ಧಾರವಾಡ, ಗದಗ, ಕೊಡಗು, ಕೊಪ್ಪಳ, ಮೈಸೂರು ಜಿಲ್ಲೆಗಳಲ್ಲಿ 9,163 ಮನೆಗಳು ನಾಶವಾಗಿದ್ದು, 130 ಮಂದಿ ಸಾವನ್ನಪ್ಪಿದ್ದಾರೆ. ಅಧಿಕ ಪ್ರಮಾಣದ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಜಿಲ್ಲೆಯ ಪ್ರಮುಖ ರಸ್ತೆಗಳು ನಾಶವಾಗಿದೆ. ಇದರಿಂದ ರಸ್ತೆ ಸಂಪರ್ಕ ಮಾರ್ಗ ಹಲವು ಪ್ರದೇಶಗಳಲ್ಲಿ ಕಷ್ಟಸಾಧ್ಯವಾಗಿದೆ. ಹೀಗಾಗಿ ಸದ್ಯ ಕೇಂದ್ರ ಸರ್ಕಾರದಿಂದ ಎನ್‍ಡಿಆರ್‍ಎಫ್ ನಿಂದ ಪರಿಹಾರವಾಗಿ ಕೇವಲ 1 ಲಕ್ಷ ರೂ. ನೀಡುತ್ತಿದ್ದು, ಹೆಚ್ಚಿನ ಮೊತ್ತ ನೀಡುವಂತೆ ಮನವಿ ಮಾಡಿದ್ದಾರೆ.

ಸಮ್ಮಿಶ್ರ ಸರ್ಕಾರ ವಿರುದ್ಧ ವಾಗ್ದಾಳಿ: ತಮ್ಮ ಭಾಷಣದ ನಡುವೇ ರಾಜ್ಯ ಸಮ್ಮಿಶ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, ರಾಜ್ಯ ಸರ್ಕಾರಕ್ಕೆ ಕಳೆದ 4 ವರ್ಷಗಳಿಂದ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದ್ದೇನೆ. ಇದುವರೆಗೂ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಅನುದಾನ ನೀಡುವಲ್ಲಿಯೂ ರಾಜ್ಯ ಸರ್ಕಾರ ಹಿಂದೆ ಉಳಿದಿದ್ದು, ನಮಗೇ ಯಾವುದೇ ಬೆಂಬಲ ನೀಡಿಲ್ಲ. ಕಳೆದ 2 ವರ್ಷಗಳಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿದ ವೇಣುಗೋಪಾಲ್ ಅವರು ಈ ಕುರಿತು ಗಮನ ಹರಿಸದೆ ಸದನದಲ್ಲಿ ಕೇವಲ ಆರೋಪಗಳನ್ನು ಮಾತ್ರ ಮಾಡುತ್ತಾರೆ ಎಂದು ದೂರಿದರು.

ಕರ್ನಾಟಕದ ಸಿಎಂ ತಾವು ವಿಷಕಂಠ ಎಂದು ಹೇಳಿದ್ದಾರೆ. ಅಧಿಕಾರಕ್ಕಾಗಿ ವಿಷನುಂಗುತ್ತಿದ್ದಾರೆ. ಕಾಂಗ್ರೆಸ್ ಅವರೊಂದಿಗೆ ಸೇರಿ ಅಧಿಕಾರಿಕ್ಕಾಗಿ ಮೈತ್ರಿ ಮಾಡಿಕೊಂಡಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆಯೂ ರೈತರ ಸಾವು ಅಧಿಕ ಪ್ರಮಾಣದಲ್ಲಿ ಇತ್ತು ಎಂದು ಆರೋಪಿಸಿ ಕಿಡಿಕಾರಿದರು.

Comments

Leave a Reply

Your email address will not be published. Required fields are marked *