ಐಟಿ ದಾಳಿ ನಡೆಸಲು 300 ಕ್ಯಾಬ್ ರೆಡಿಯಾಗಿವೆ: ಸಿಎಂ

– ಜೆಡಿಎಸ್, ಕಾಂಗ್ರೆಸ್ ಅಭಿಮಾನಿಗಳೇ ಐಟಿ ದಾಳಿಗೆ ಟಾರ್ಗೆಟ್
– ಸಿಆರ್‌ಪಿಎಫ್ ಕರೆದುಕೊಂಡು ಬಂದು ದಾಳಿ

ಮಂಡ್ಯ: ಕೇಂದ್ರದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಜೆಡಿಎಸ್, ಕಾಂಗ್ರೆಸ್ ಅಭಿಮಾನಿಗಳೇ ಟಾರ್ಗೆಟ್ ಆಗಿದ್ದು, ಒಬ್ಬರಿಗೆ ಅನುಕೂಲ ಮಾಡಿಕೊಳ್ಳಲು ದಾಳಿಗೆ ಸಿದ್ಧತೆ ನಡೆಸಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಆಪ್ತ ಮೂಲಗಳಿಂದ ನನಗೆ ಫೋನ್ ಕರೆ ಬಂದಿದ್ದು, ಕಾಂಗ್ರೆಸ್, ಜೆಡಿಎಸ್ ಅಭಿಮಾನಿಗಳನ್ನು ಗುರಿ ಮಾಡಿ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಪಕ್ಷ ಬೆಂಬಲಿಗರ ಮೇಲೆ ದಾಳಿ ನಡೆಸಿ ಎಷ್ಟು ಹಣ ತೆಗೆದುಕೊಂಡು ಹೋಗುತ್ತಾರೆ ನೋಡುತ್ತೇನೆ. ಆದರೆ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದರೆ ನಾನು ಕೂಡ ಪಶ್ಚಿಮ ಬಂಗಾಳ ಸಿಎಂರಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಐಟಿ ದಾಳಿ ನಡೆಸುವ ಅಧಿಕಾರಿಯ ಹೆಸರನ್ನು ಪ್ರಸ್ತಾಪ ಮಾಡಿದ ಅವರು, ಐಟಿ ಇಲಾಖೆಯ ಬಾಲಕೃಷ್ಣ (ಐಆರ್ ಎಸ್ ಅಧಿಕಾರಿ) ಎಂಬವರ ನೇತೃತ್ವದಲ್ಲಿ 250ಕ್ಕೂ ಹೆಚ್ಚು ಅಧಿಕಾರಿಗಳನ್ನು ಕರೆಸಿಕೊಂಡು ದಾಳಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಐಟಿ ದಾಳಿಯಲ್ಲಿ ರಾಜ್ಯ ಸರ್ಕಾರದ ಪೊಲೀಸ್ ಇಲಾಖೆಯ ನೆರವು ತೆಗೆದುಕೊಳ್ಳುತ್ತಾರೆ. ಆದರೆ ಅದನ್ನು ಬಿಟ್ಟು ಕೇಂದ್ರದ ಸಿಆರ್ ಪಿಎಫ್ ಕರೆಸಿಕೊಂಡು ದಾಳಿ ಮಾಡಲು ಹೊರಟಿರುವುದು ಬಹಳ ದಿನ ನಡೆಯಲ್ಲ. ಕೇಂದ್ರ ಸರ್ಕಾರದ ಬಿಜೆಪಿ ಪರ ಬಾಲಕೃಷ್ಣ ಅವರು ಬೆಳಗ್ಗೆ 5 ಗಂಟೆಗೆ ದಾಳಿ ಮಾಡಲು ಸಿದ್ಧರಾಗಿದ್ದು, ಇಂತಹ ದಾಳಿಗಳು ನಡೆದರೆ ಪ್ರಾಯಶ್ಚಿತ್ತ ಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಮುಖ್ಯಮಂತ್ರಿಯಾಗಿ ಒಂದೇ ಒಂದು ಪ್ರಕರಣದಲ್ಲಿ ನಾನು ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಶಿವಮೊಗ್ಗದ ಹೊಸನಗರದ ಬಳಿ ಎರಡು ಕೋಟಿ ರೂ. ಹಣ ಜಪ್ತಿ ಮಾಡಿದ್ದರು. ಆದರೆ ಈ ಬಗ್ಗೆ ಮಾಹಿತಿ ನೀಡಿಲ್ಲ. ಇವರ ನಡವಳಿಕೆ ನಾವು ಹೇಳಿದಂತೆ ನಡೆಯುತ್ತದೆ ಎಂಬಂತಾಗಿದೆ. ಕೇಂದ್ರ ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ, ಇವರು ಎಚ್ಚರಿಕೆಯಿಂದ ನಡೆದುಕೊಳ್ಳುವುದು ಸೂಕ್ತ ಎಂದರು. ಈಗಾಗಲೇ ಬೇರೆ ಬೇರೆ ರಾಜ್ಯಗಳಿಂದ ಕರೆಯಿಸಿಕೊಂಡಿದ್ದು, ಈಗಾಗಲೇ ಅಧಿಕಾರಿಗಳನ್ನು ಕರೆತರಲು ಬೆಂಗಳೂರು ವಿಮಾನ ನಿಲ್ದಾಣದಲ್ಲಿ 300 ಕ್ಯಾಬ್‍ಗಳು ಸಿದ್ಧವಾಗಿದೆ. ಇಷ್ಟು ಕೀಳು ಮಟ್ಟದಲ್ಲಿ ರಾಜಕೀಯ ಮಾಡಿ ನಮ್ಮನ್ನು ಹೆದರಿಸುತ್ತಿದ್ದಾರೆ. ನಾವು ಯಾವುದೇ ದರೋಡೆ ಕೆಲಸ ಮಾಡಿಲ್ಲ. ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇವೆ. ಚುನಾವಣೆಯ ಸಮಯದಲ್ಲಿ ಐಟಿಯವರು ಆಡುವ ಆಟ ನಮಗೆ ಗೊತ್ತಿದೆ. ನಾನು ಸಂಪೂರ್ಣ ಅಧಿಕಾರ ನಮ್ಮ ಎಸಿಬಿ ಅಧಿಕಾರಿಗಳಿಗೆ ಕೊಟ್ಟಿದ್ದೇನೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *