ಥೂ ಇವ್ರ ಯೋಗ್ಯತೆಗೆ ನಾಚಿಕೆ ಆಗಬೇಕು: ಬಿಜೆಪಿ ವಿರುದ್ಧ ಸಚಿವ ಪುಟ್ಟರಾಜು ಕಿಡಿ

ಮಂಡ್ಯ: ಥೂ ಇವರ ಯೋಗ್ಯತೆಗೆ ನಾಚಿಕೆ ಆಗಬೇಕು. ಇಂಥ ನೀತಿಗೆಟ್ಟ, ಕೀಳು ಮಟ್ಟದ ರಾಜಕಾರಣವನ್ನು ಯಾರೂ ಮಾಡಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ನಗರಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಆತ್ಮಾನಂದ ಮನೆ ಮೇಲಿನ ಐಟಿ ದಾಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಸಾವಿರ ಐಟಿ ದಾಳಿ ಮಾಡಿದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರನ್ನು ಹೆದರಿಸಲು ಸಾಧ್ಯವಿಲ್ಲ. ಮೈತ್ರಿ ಪಕ್ಷಗಳ ಮುಖಂಡರ ಸಭೆ ಆತ್ಮಾನಂದ ಅವರ ಮನೆಯಲ್ಲಿ ನಡೆಯಿತು. ಈ ಮೂಲಕ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಹುನ್ನಾರ ನಡೆಸುತ್ತಿರುವುದು ನಮಗೆ ಗೊತ್ತಾಗುತ್ತಿದೆ ಎಂದು ಪರೋಕ್ಷವಾಗಿ ಸುಮಲತಾ ಅಂಬರೀಶ್ ಅವರಿಗೆ ಟಾಂಗ್ ಕೊಟ್ಟರು. ಇದನ್ನು ಓದಿ: ಮಂಡ್ಯದ ಕೈ ನಾಯಕ, ಆತ್ಮಾನಂದ ಮನೆ ಮೇಲೆ ಐಟಿ ದಾಳಿ

ಮಾಜಿ ಸಚಿವ ಆತ್ಮಾನಂದ ಅವರು ಎಲ್ಲ ದಾಖಲೆಗಳನ್ನು ಸರಿಯಾಗಿ ಇಟ್ಟಿದ್ದರು. ಐಟಿ ಅಧಿಕಾರಿಗಳೇ ಮಾಜಿ ಸಚಿವರಿಗೆ ಶಹಬ್ಬಾಸ್‍ಗಿರಿ ಕೊಟ್ಟು ಹೋಗುತ್ತಾರೆ. ಇದು ರಾಜಕೀಯ ಪ್ರೇರಿತ ದಾಳಿ. ಒಬ್ಬ ಕೋಳಿ ವ್ಯಾಪಾರ ಮಾಡುವ ಜೆಡಿಎಸ್ ಕಾರ್ಯಕರ್ತನ ಮೇಲೆ ದಾಳಿ ಮಾಡುತ್ತಾರೆ. ಅಂದ್ರೆ ಥೂ ಇವರ ಯೋಗ್ಯತೆಗೆ ನಾಚಿಕೆಯಾಗಬೇಕು. ದೇಶದ ಇತಿಹಾಸದಲ್ಲಿ ಚುನಾವಣೆ ವೇಳೆ ಇಂತಹ ನೀತಿಗೆಟ್ಟ ರಾಜಕಾರಣ ಯಾರೂ ಮಾಡಿರಲಿಲ್ಲ. ಅಧಿಕಾರ ಇದೆ ಎಂದು ಕೀಳುಮಟ್ಟದ ರಾಜಕಾರಣ ಮಾಡಿದರೆ ಮುಂದೆ ಜಿಲ್ಲೆಯ ಜನ ಉತ್ತರಿಸುತ್ತಾರೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಒನ್ ಸೈಡ್ ಚುನಾವಣೆ ಆಗುತ್ತದೆ. ಸಿಎಂ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಋಣವನ್ನು ಜಿಲ್ಲೆಯ ಜನ ತೀರಿಸುತ್ತಾರೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *