ಸಿದ್ದರಾಮಯ್ಯ ಸರ್ಕಾರದಲ್ಲಿ ಸೂಟ್‍ಕೇಸ್ ಕೊಟ್ರೆನೇ ಕೆಲಸ- ಹಂಪಿ ಕನ್ನಡ ವಿವಿ ಕುಲಪತಿ ಹೇಳಿಕೆ

ಬಳ್ಳಾರಿ: ವಿಧಾನಸೌಧಕ್ಕೆ ಸೂಟ್‍ಕೇಸ್ ತುಂಬಾ ಹಣ ತುಂಬಿಕೊಂಡು ಹೋದ್ರೆ ಮಾತ್ರ ಕೆಲಸ ಆಗುತ್ತೆ. ಸಿಎಂ ಸಿದ್ದರಾಮಯ್ಯನವರ ಭರವಸೆ ಒಂದೆ ದಿನಕ್ಕೆ ಮಾತ್ರ ಸೀಮಿತ ಅಂತ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಮಲ್ಲಿಕಾ ಘಂಟಿ ಹೇಳಿಕೆ ನೀಡಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ವಿಧಾನಸೌಧಕ್ಕೆ ಸೂಟ್‍ಕೇಸ್ ತುಂಬಾ ಹಣ ತುಂಬಿಕೊಂಡು ಹೋದ್ರೆ ಮಾತ್ರ ಕೆಲಸವಾಗುತ್ತಂತೆ. ಹೀಗಾಗೇ ವಿಶ್ವ ವಿದ್ಯಾಲಯಗಳ ಅಭಿವೃದ್ಧಿಯಾಗುತ್ತಿಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳೇ ಸ್ವಂತ ಸರ್ಕಾರದ ವಿರುದ್ಧ ಹೇಳಿಕೆಯನ್ನು ನೀಡಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೀಗ ಬೆಳ್ಳಿಹಬ್ಬದ ಸಂಭ್ರಮ. ಬೆಳ್ಳಿಹಬ್ಬದ ಅಂಗವಾಗಿ ಆಯೋಜಿಸಿದ್ದ ನುಡಿಹಬ್ಬವನ್ನು ಮಂಗಳವಾರ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ರು. ಈ ವೇಳೆ ಹಂಪಿ ಕನ್ನಡ ವಿವಿಯಲ್ಲಿನ ಸಿಬ್ಬಂದಿ ಅಧ್ಯಾಪಕರ ಕೊರತೆ ನೀಗಿಸುವ ಭರವಸೆಯನ್ನು ಸಿಎಂ ನೀಡಿದ್ರು. ಆದ್ರೆ ಎರಡನೇ ದಿನದ ವಿಚಾರ ಸಂಕಿರಣ ಸಮಾರಂಭದಲ್ಲಿ ಹಂಪಿ ಕನ್ನಡ ವಿವಿಯ ಕುಲಪತಿ ಡಾಕ್ಟರ್ ಮಲ್ಲಿಕಾ ಘಂಟಿ, ಸಿಎಂ ಸಿದ್ದರಾಮಯ್ಯ ಭರವಸೆಯ ಭಾಷಣದ ವಿರುದ್ಧವಾಗಿ ಮಾತನಾಡಿ ನೋವು ತೋಡಿಕೊಂಡಿದ್ದಾರೆ.

ವಿವಿಯ ಹಿಂದಿನ ಕುಲಪತಿಗಳಾಗಿದ್ದ ಚಂದ್ರಶೇಖರ ಕಂಬಾರರು ಅಂದು ವಿಧಾನಸೌಧಕ್ಕೆ ಭೇಟಿ ನೀಡಿದ್ರೆ, ಸ್ವತಃ ದೇವೇಗೌಡರಂತಹ ರಾಜಕಾರಣಿಗಳು ಮುಂದೆ ನಿಂತುಕೊಂಡು ಎಲ್ಲಾ ಕೆಲಸಗಳು ಮಾಡಿಕೊಟ್ಟು, ಸೂಟ್‍ಕೇಸ್ ತುಂಬಾ ಹಣ ಕೊಟ್ಟು ಹಂಪಿ ವಿವಿ ಅಭಿವೃದ್ಧಿ ಮಾಡಿ ಅಂತಿದ್ರು. ಆದ್ರೆ ಇಂದು ವಿವಿಯ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ವಿಧಾನಸೌಧಕ್ಕೆ ಸೂಟ್‍ಕೇಸ್ ತುಂಬಾ ಹಣ ತುಂಬಿಕೊಂಡು ಹೋಗಿ ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಧ್ಯಾಪಕರು, ಸಿಬ್ಬಂದಿಗಳ ನೇಮಕಾತಿ ವಿಚಾರದಲ್ಲಿ ಬೀದಿಗೀಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಅಂತ ಹೇಳಿದ್ದಾರೆ.

ಇಲ್ಲಿ ಪೋಸ್ಟ್ ಗಳು ಬಹಳ ಖಾಲಿ ಇದೆ ಅಂತ ಮಲ್ಲಿಕಾ ಘಂಟಿ ಹೇಳಿದ್ದಾರೆ. ಈ ಬಗ್ಗೆ ಪ್ರಸ್ತಾವನೆ ಕಳುಹಿಸಿಕೊಡಿ. 180 ಪೋಸ್ಟ್‍ಗಳು ಖಾಲಿ ಇವೆ ಎಂದಿದ್ದಾರೆ. ಮೊದಲನೇ ಹಂತದಲ್ಲಿ ಅಗತ್ಯ ಎಷ್ಟಿದೆ ಅಷ್ಟು ಮಂಜೂರು ಮಾಡಿಕೊಡೋಣ ಎಂದು ಮಂಗಳವಾರದಂದು ತಮ್ಮ ಭಾಷಣದಲ್ಲಿ ಸಿಎಂ ಭರವಸೆ ನೀಡಿದ್ದರು.

Comments

Leave a Reply

Your email address will not be published. Required fields are marked *